ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ ಇವರ ಸಹಯೋಗದಲ್ಲಿ 2026-27ನೇ ಸಾಲಿನ ಏಕವಲಯ ಅಂತರ್ ಕಾಲೇಜುಗಳ ಪುರುಷ ಮತ್ತು ಮಹಿಳಾ ಚದುರಂಗ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು.ಕಾರ್ಯಕ್ರಮವನ್ನು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭೀಮಸೇನ ಬಿ. ಚಿಮ್ಮನಕಟ್ಟಿ ಉದ್ಘಾಟಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕಾರ್ಯವೈಖರಿ, ಬೋಧನಾ ಗುಣಮಟ್ಟ ಹಾಗೂ ಕಾಲೇಜಿನಲ್ಲಿ ನಡೆಯುತ್ತಿರುವ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಬಡ ಹಾಗೂ ಸಾಮಾನ್ಯ ಕುಟುಂಬಗಳ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.ವಿದ್ಯಾರ್ಥಿಗಳ ಕಲಿಕೆ, ಕ್ರೀಡೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಕಾಲೇಜು ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶಾಸಕರು, ಅವರ ಕಲಿಕೆ, ಕ್ರೀಡಾಸಕ್ತಿ ಮತ್ತು ಭವಿಷ್ಯದ ಗುರಿಗಳ ಕುರಿತು ವಿಚಾರಿಸಿ,ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





