ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ) ಯೋಜನೆ ಅಡಿ ಕೆಲಸ ಮಾಡಿ ಎರಡು ತಿಂಗಳಾದರೂ ದುಡಿಮೆಯ ಹಣ ಜಜೆ ಆಗಿರುವುದಿಲ್ಲ ಎಂದು ಆರೋಪಿಸಿ ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿಯ ಜೆ ಪಿ ಗ್ರಾಮ ಮತ್ತು ತುಂಬರಮಟ್ಟಿ ಗ್ರಾಮದಲ್ಲಿ ಕೂಲಿ ಕಾರ್ಮಿಕರ ಸಂಘಟನೆ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದರು.
“ತಮಗೆ ಬೇಕಾದವರಿಗೆ ಪಗಾರ ಕೊಟ್ಟಾರ, ನಮಗೆ ದುಡಿದ ಪಗಾರ ಕೊಡದೆ ನಮ್ಮ ಬದುಕಿನೊಂದಿಗೆ ಆಟ ಆಡುತ್ತಿದ್ದಾರೆ. ತಮಗ ಹಿಂಗ ಆಗಿದ್ದರೆ ಸುಮ್ಮನಿರುತ್ತಿದ್ದರಾ?. ಮನರೇಗಾದಲ್ಲಿ ಕೆಲಸ ಮಾಡಿ ಎರಡು ತಿಂಗಳಾಯಿತು. ಇವತ್ತಿಗೂ ಕೂಲಿ ಹಣ ಜಮೆಯಾಗಿಲ್ಲ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗಿದೆ” ಎಂದು ಮಹಿಳಾ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.
“ಹಣ ಕೇಳಿದರೆ, ಆ ವೇತನ ರಿಜೆಕ್ಟ್ ಮಾಡಿದ್ದಾರೆಂದು ಹೇಳುತ್ತಾರೆ. ಅದನ್ನು ಪ್ರಶ್ನಿಸಿದರೆ, ಅಧ್ಯಕ್ಷರ ಡೊಂಗಲ್ ಇಲ್ಲವೆಂದು ಕುಂಟು ನೆಪ ಹೇಳಿ ಮುಂದೂಡುತ್ತಿದ್ದಾರೆ” ಎಂದು ಮಹಿಳಾ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಪತ್ರಕರ್ತರ ಸಮಸ್ಯೆ ಪರಿಹರಿಸುವಂತೆ ಒತ್ತಾಯ
“ಕಾನೂನು 2005ರ ಪ್ರಕಾರ ನಮಗೆ ಕೂಲಿ ಹಣ ಮತ್ತು ನಷ್ಟ ಪರಿಹಾರ ಕೊಡಲೇಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರು, ಗ್ರಾಮಸ್ಥರು ಇದ್ದರು.