ಹುತ್ತಗಳಿಗೆ ಮತ್ತು ನಾಗರ ಮೂರ್ತಿಗಳಿಗೆ ಹಾಲು ಎರೆದು ವ್ಯರ್ಥಮಾಡದೇ, ಬಡವರ ಮಕ್ಕಳಿಗೆ ಹಾಲು ಕೊಡಿ. ಸಂಪ್ರದಾಯವನ್ನು ಮೀರಿ ಸತ್‌ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು ಎಂದು ಜಮಖಂಡಿಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈರಪ್ಪ ಸುತಾರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಜೈನ ಅನಾಥ ಆಶ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕ ಹಾಗೂ ಭಾರತೀಯ ವಿದ್ಯಾರ್ಥಿ ಸಂಘ ಒಗ್ಗೂಡಿ ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ಆಚರಿಸಿದರು. ಈ ವೇಳೆ ಅವರು ಮಾತನಾಡಿದರು.
“ಪ್ರಬಲ ಸಮುದಾಯವು ಸಮಾಜದಲ್ಲಿ ಮೂಡನಂಬಿಕೆಗಳನ್ನು ಬಿತ್ತಿ, ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಕಲ್ಲನಾಗರಕ್ಕೆ ಹಾಲು ಎರೆದರೆ ಯಾವುದೇ ಪ್ರಯೋಜನವಿಲ್ಲ., ಇಂತಹ ಮೂಡನಂಬಿಕೆಗಳನ್ನು ಬಿಟ್ಟು, ಅದೇ ಹಾಲನ್ನು ಹಸಿದವರಿಗೆ ನೀಡಬೇಕು” ಎಂದು ಈರಪ್ಪ ಸುತಾರ ಹೇಳಿದರು.
ಬಿವಿಎಸ್ ಮುಖಂಡ ಪ್ರವೀಣ ಮೌರ್ಯ ಮಾತನಾಡಿ, “ದೇಶದಲ್ಲಿ ಇನ್ನು ಕೂಡ ಅಪೌಷ್ಟಿಕತೆ ಕಾಡುತ್ತಿದೆ. ಹಾಲನ್ನು ವ್ಯರ್ಥ ಮಾಡದೇ ಅಗತ್ಯ ಇರುವವರಿಗೆ ಕುಡಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖಂಡರಾದ ಮಹಾದೇವ ಮೌರ್ಯ, ಕಲ್ಮೇಶ ಮಾದರ ಮತ್ತು ಗಣೇಶ್ ಮಾಂಗ್ ಇದ್ದರು.