ಅಂಗನವಾಡಿಯಲ್ಲಿ ವಿತರಿಸಿದ್ದ ಆಹಾರ ಸೇವಿಸಿ ಗರ್ಭಿಣಿ ಮತ್ತು ಆರು ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ದೇವರಾಜನಗರದ ಬಸವ ಕಾಲೋನಿಯಲ್ಲಿ ಘಟನೆ ನಡೆದಿದೆ. ಅಂಗನವಾಡಿಯಲ್ಲಿ ನೀಡಿದ್ದ ಆಹಾರ ಸೇವಿಸಿದ ಪರಿಣಾಮ ಗರ್ಭಿಣಿ ಭಾಗೀರಥಿ ಶಿವಾನಂದ ಕಾಂಬಳೆ ಮತ್ತು ಆರು ಮಕ್ಕಳು ವಾಂತಿ-ಭೇದಿಗೆ ತುತ್ತಾಗಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ಅಂಗನವಾಡಿ ಕೇಂದ್ರವು ಅವ್ಯವಸ್ಥೆಯಿಂದ ಕೂಡಿದೆ. ಆಹಾರದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಆದರೂ, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಯಾವುದೇ ಕ್ರಮ ಕೈಕೊಂಡಿಲ್ಲ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.