ಶಾಲಾ ಕೊಠಡಿಗಳ ಸುಸ್ಥಿತಿ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರೂ ಬಾಗಲಕೋಟೆ ಜಿಲ್ಲೆಯ ಮುಗುಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯ ಚಾವಣಿ ಕುಸಿದಿರುವುದು ಗಂಭೀರ ವಿಚಾರವಾಗಿದೆ. ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸದೇ ವರದಿ ನೀಡಿರುವ ಪಂಚಾಯತ್ ರಾಜ್ ಇಲಾಖೆಯ ಇಬ್ಬರು ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಸೂಚಿಸಿದರು.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮುಗುಳೊಳ್ಳಿ ತಾಂಡಾ ಸರ್ಕಾರಿ ಶಾಲೆಯ ಚಾವಣಿ ಕುಸಿತದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿಗಳೊಂದಿಗೆ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಗುಳೊಳ್ಳಿ ತಾಂಡಾ ಸರ್ಕಾರಿ ಶಾಲೆಯ ಕೊಠಡಿಗಳು ಸುಸ್ಥಿತಿಯಲ್ಲಿವೆ ಎಂದು ಪಿಆರ್‌ಇಡಿ ಎಇಇ ಎಸ್.ಎಂ. ರೇವಡಿ ಹಾಗೂ ಜೆಇ ಎಸ್.ಎಂ. ಸಂಗನಾಳ ವರದಿ ನೀಡಿದ್ದರು. ಮಳೆ ಬಂದಾಗ ಎರಡು ಕೊಠಡಿಗಳು ಮಾತ್ರ ಸೋರಿಕೆಯಾಗುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇದೀಗ ಶಾಲೆಯ ಚಾವಣಿ ಕುಸಿದಿರುವುದು ಅಧಿಕಾರಿಗಳ ಪರಿಶೀಲನಾ ವರದಿಯ ನಿಖರತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಹೀಗಾಗಿ ಇಬ್ಬರು ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗಜಾನನ ಬಾಲೆ ತಿಳಿಸಿದರು.
ಜಿಲ್ಲೆಯ 1,424 ಸರ್ಕಾರಿ ಶಾಲೆಗಳ ಒಟ್ಟು 9,449 ಕೊಠಡಿಗಳ ಪೈಕಿ 6,961 ಕೊಠಡಿಗಳು ಸುಸ್ಥಿತಿಯಲ್ಲಿವೆ. 1,232 ಕೊಠಡಿಗಳು ಸಣ್ಣ ದುರಸ್ತಿ ಹಾಗೂ 1,535 ಕೊಠಡಿಗಳು ದೊಡ್ಡ ದುರಸ್ತಿಗೆ ಒಳಪಟ್ಟಿವೆ. ಒಟ್ಟಾರೆ 8,367 ಕೊಠಡಿಗಳು ತರಗತಿ ನಡೆಸಲು ಯೋಗ್ಯವಾಗಿದ್ದು, 628 ಕೊಠಡಿಗಳು ಬೋಧನೆಗೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ.
ಮುಗುಳೊಳ್ಳಿ ಶಾಲೆಯ ಚಾವಣಿ ಕುಸಿತದ ಹಿನ್ನೆಲೆಯಲ್ಲಿ ಬೋಧನೆಗೆ ಯೋಗ್ಯವಲ್ಲ ಎಂದು ಗುರುತಿಸಲಾಗಿರುವ 628 ಕೊಠಡಿಗಳನ್ನು ಮತ್ತೊಮ್ಮೆ ಪರಿಶೀಲಿಸಲು ಅಧಿಕಾರಿಗಳಿಗೆ 15 ದಿನಗಳ ಕಾಲಾವಕಾಶ ನೀಡಿದರು. ಪ್ರತಿಯೊಂದು ಕೊಠಡಿಯ ಜಿಐ ಟ್ಯಾಗ್ ಸಹಿತ ಛಾಯಾಚಿತ್ರಗಳನ್ನು ಒಳಗೊಂಡ ಸಮರ್ಪಕ ಹಾಗೂ ವಾಸ್ತವಾಂಶದ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.
ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರಿಶೀಲಿಸಿ
ಶಾಲೆಗಳಿಗೆ ಕೇವಲ ನೀರು ಪೂರೈಕೆ ಮಾಡಿದರೆ ಸಾಲದು. ಪೂರೈಕೆಯಾಗುವ ನೀರಿನ ಗುಣಮಟ್ಟ ಹಾಗೂ ನೀರು ಸಂಗ್ರಹಿಸುವ ಟ್ಯಾಂಕ್‌ಗಳ ಸ್ವಚ್ಛತೆಯ ಬಗ್ಗೆಯೂ ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಟ್ಯಾಂಕ್‌ಗಳನ್ನು ಆಗಾಗ ಸ್ವಚ್ಛಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹುನಗುಂದ ತಾಲ್ಲೂಕಿನ ಶಾಲೆಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀರಿನ ಸಂಗ್ರಹ ಟ್ಯಾಂಕ್ ಸ್ವಚ್ಛವಾಗಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಗಜಾನನ ಬಾಲೆ ನಿರ್ದೇಶನ ನೀಡಿದರು.





