ಸ್ಥಳೀಯರಿಗೆ ಉದ್ಯೋಗ ಕಲ್ಪಿಸದೆ, ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾದ ಷರತ್ತುಗಳನ್ನು ಪೂರೈಸದೆ ಕೈಗಾರಿಕಾ ಮತ್ತು ಗಣಿಗಾರಿಕೆ ಪರವಾನಗಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ, ಕೀನ್ಯಾದಲ್ಲಿನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ ಕೂಡಲೇ ದೇಶ ತೊರೆಯುವಂತೆ ಟಾಟಾ ಕೆಮಿಕಲ್ಸ್‌ಗೆ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಸೂಚಿಸಿದ್ದಾರೆ.
ಸೆ.3ರಂದು ಆದೇಶಿಸಿ ಮಾತನಾಡಿದ ರುಟೊ, ಟಾಟಾ ಕೆಮಿಕಲ್ಸ್ ಕೀನ್ಯಾದಲ್ಲಿ ಸುಮಾರು 100 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಯಾವುದೇ ಕಾರ್ಖಾನೆ ನಿರ್ಮಿಸಿಲ್ಲ ಮತ್ತು ಸಾಕಷ್ಟು ಕೀನ್ಯನ್ನರಿಗೆ ಉದ್ಯೋಗ ನೀಡಿಲ್ಲ . ಇತ್ತೀಚೆಗೆ ನಾನು ಅವರಿಗೆ ದೇಶ ತೊರೆಯುವಂತೆ ಹೇಳಿದ್ದೇನೆ. ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಕಂಪನಿ ಗಳಿಸುತ್ತಿರುವ ಲಾಭವನ್ನು ಕೀನ್ಯಾದಲ್ಲೇ ಮರುಹೂಡಿಕೆ ಮಾಡುವ ಬದಲು ಭಾರತ ಮತ್ತು ಇತರ ದೇಶಗಳಿಗೆ ಕೊಂಡೊಯ್ಯುತ್ತಿದ್ದಾರೆ. ನಾವೇನು ಬೇರೆಯವರ ಗುಲಾಮರೇ? ಎಂದು ರುಟೊ ಕಿಡಿಕಾರಿದ್ದಾರೆ.
ಕೀನ್ಯಾದ ಮಗಾಡಿ ಪ್ರದೇಶದಲ್ಲಿ ಟಾಟಾ ಕೆಮಿಕಲ್ಸ್, ಆಫ್ರಿಕಾದ ಅತಿದೊದ್ದ ಸೋಡಾ ಆ್ಯಶ್ (ಸೋಡಿಯಂ ಕಾರ್ಬೊನೇಟ್) ಉತ್ಪಾದನಾ ಘಟಕವನ್ನು ನಡೆಸುತ್ತಿದೆ. ಇಲ್ಲಿಂದ ವಾರ್ಷಿಕ 3.5 ಲಕ್ಷ ಟನ್‌ಗೂ ಹೆಚ್ಚು ಸೋಡಾ ಆ್ಯಶ್ ಅನ್ನು ವಿಶ್ವದ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಟಾಟಾ ಕೆಮಿಕಲ್ಸ್ ಕಳೆದ 115 ವರ್ಷಗಳಿಂದ ಕೀನ್ಯಾದಲ್ಲಿ ಸೋಡಾ ಆ್ಯಶ್ ಗಣಿಗಾರಿಕೆ ಮತ್ತು ರಫ್ತು ವ್ಯವಹಾರ ನಡೆಸುತ್ತಿದೆ. ಮಗಾಡಿ ಘಟಕದಲ್ಲಿ ಸುಮಾರು 700 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ಸೋಡಾ ಆ್ಯಶ್ ಗಾಜು ತಯಾರಿಕೆಯಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಸಾಮಾನ್ಯವಾಗಿ ಸೋಡಾ ಆ್ಯಶ್ ದೊರೆಯುವ ಹಲವು ಪ್ರದೇಶಗಳಲ್ಲಿ ಖನಿಜ ನಿಕ್ಷೇಪ ಭೂಮಿಯೊಳಗಿರುತ್ತದೆ. ಆದರೆ ಮಗಾಡಿ ಪ್ರದೇಶದಲ್ಲಿ ಇದು ಭೂಮಿಯ ಮೇಲ್ಮೈಯಲ್ಲೇ ದೊರೆಯುವುದು ವಿಶೇಷ.
ಟಾಟಾ ಕೆಮಿಕಲ್ಸ್ ಕೀನ್ಯಾ ತೊರೆಯುವಂತೆ ಜುಲೈ 28ರಂದೇ ಸೂಚಿಸಲಾಗಿತ್ತು. ಕೀನ್ಯಾದ ಗಣಿಗಾರಿಕೆ, ಬ್ಲೂ ಎಕಾನಮಿ ಮತ್ತು ಸಾಗರ ವ್ಯವಹಾರಗಳ ಸಚಿವ ಹಸನ್ ಅಲಿ ಜೊಹೊ, ಮಗಾಡಿ ಘಟಕದಲ್ಲಿನ ಎಲ್ಲ ಗಣಿಗಾರಿಕೆ ಚಟುವಟಿಕೆ ಮತ್ತು ಸೋಡಾ ಆ್ಯಶ್ ರಫ್ತನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ಈ ಆದೇಶವನ್ನು ತಡೆಹಿಡಿಯುವಂತೆ ಕೋರಿ ಟಾಟಾ ಕೆಮಿಕಲ್ಸ್ ಮಗಾಡಿ ಕೀನ್ಯಾ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದಾಗ್ಯೂ, ಈ ಕುರಿತ ಮುಖ್ಯ ಅರ್ಜಿ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದೆ.
ಟಾಟಾ ಕೆಮಿಕಲ್ಸ್ ನಿರ್ಗಮಿಸಿದರೆ, ಮಗಾಡಿಯ ಗಣಿಗಾರಿಕೆ ಕಾರ್ಯಾಚರಣೆಯನ್ನು ಎರಡು ಕಂಪನಿಗಳಿಗೆ ವಹಿಸಲು ಕೀನ್ಯಾ ಸರ್ಕಾರ ಮುಂದಾಗಿದೆ ಎಂದು ರುಟೊ ಹೇಳಿರುವುದಾಗಿ ವರದಿಯಾಗಿದೆ. ಕೀನ್ಯಾದ ಕೈಗಾರಿಕೀಕರಣದ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಕಂಪನಿಗಳು ಕೇವಲ ಗಣಿಗಾರಿಕೆ ನಡೆಸುವುದಲ್ಲದೆ, ಗಾಜು ಮತ್ತು ಇತರ ರಾಸಾಯನಿಕಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸಲಿವೆ ಎಂದು ಅವರು ಹೇಳಿದ್ದಾರೆ.
ಟಾಟಾ ಕೆಮಿಕಲ್ಸ್ ಕೀನ್ಯಾದಿಂದ ಹೊರಬಂದರೆ ಅದರ ಹಣಕಾಸಿನ ಪರಿಣಾಮವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ರಾಯಧನ, ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತ ಹಾಗೂ ಖನಿಜ ಸಂಪನ್ಮೂಲಗಳ ಹೊರತೆಗೆಯುವಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಟಾಟಾ ಕೆಮಿಕಲ್ಸ್ ಮತ್ತು ಕೀನ್ಯಾ ಸರ್ಕಾರಗಳ ನಡುವೆ ಬಹುಕಾಲದಿಂದ ವಿವಾದವಿದೆ.
ಗಣಿಗಾರಿಕೆಯಿಂದ ಸ್ಥಳೀಯರ ಪ್ರಮುಖ ಜೀವನೋಪಾಯಗಳಾದ ಮೀನುಗಾರಿಕೆ ಅಥವಾ ಕೃಷಿಗೆ ಹಾನಿಯಾಗಿರುವ ಪ್ರದೇಶಗಳಲ್ಲಿ, ಹೊಸ ಕೈಗಾರಿಕೆಗಳ ಮೂಲಕ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ: ಪತಿ ಹೋದಲ್ಲೆಲ್ಲಾ ಪಗ್ ನಾಯಿಯಂತೆ ಪತ್ನಿ ಹಿಂಬಾಲಿಸಬೇಕಿಲ್ಲ: ಮದ್ರಾಸ್ ಹೈಕೋರ್ಟ್
ಆದರೆ ರುಟೊ ಸರ್ಕಾರದ ಈ ನಿರ್ಧಾರಕ್ಕೆ ದೇಶದೊಳಗೇ ವಿರೋಧ ವ್ಯಕ್ತವಾಗಿದೆ. ಮಾಜಿ ಉಪಾಧ್ಯಕ್ಷ ರಿಗಾಥಿ ಗಚಾಗುವಾ ಅವರ Democracy for Citizens Party (DCP)ಗೆ ಸೇರಿದ ನಾಯಕರು ಟಾಟಾ ಕೆಮಿಕಲ್ಸ್ ವಿರುದ್ಧದ ಕ್ರಮವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ರುಟೊ ತಮ್ಮ ವೈಯಕ್ತಿಕ ವ್ಯವಹಾರಿಕ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಗಾಡಿ ಪ್ರದೇಶದ ಭೂಗರ್ಭದಲ್ಲಿ ಟ್ರಿಲಿಯನ್‌ಗಟ್ಟಲೆ ಕೀನ್ಯಾ ಶಿಲ್ಲಿಂಗ್ ಮೌಲ್ಯದ ಲಿಥಿಯಂ ನಿಕ್ಷೇಪಗಳಿವೆ ಎಂದು ನ್ಯಾಂದರುವಾ ಸೆನೆಟರ್ ಜಾನ್ ಮೆಥು ಹೇಳಿರುವುದಾಗಿ ವರದಿಯಾಗಿದೆ. ಆದರೆ, ಕೀನ್ಯಾದ ಮಾಧ್ಯಮಗಳ ಪ್ರಕಾರ, ಮಗಾಡಿಯಲ್ಲಿ ಇಷ್ಟೊಂದು ಪ್ರಮಾಣದ ಲಿಥಿಯಂ ನಿಕ್ಷೇಪವಿದೆ ಎಂಬ ಆರೋಪಕ್ಕೆ ಈವರೆಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ.
ಟಾಟಾ ಕೆಮಿಕಲ್ಸ್ ಕೀನ್ಯಾದ ಮಗಾಡಿ ಘಟಕವು ಕಂಪನಿಯ ಜಾಗತಿಕ ಮಟ್ಟದ ನಾಲ್ಕು ಕಾರ್ಯನಿರ್ವಹಣೆಯಲ್ಲಿರುವ ಇಂತಹ ಘಟಕಗಳ ಪೈಕಿ ಒಂದಾಗಿರುವುದರಿಂದ ಆ ದೇಶದಿಂದ ಕಾಲ್ಕೀಳಲು ಟಾಟಾ ಹಿಂದೇಟು ಹಾಕುತ್ತಿದೆ.





