ಬಿವಿವಿಎಸ್ ರಿಸರ್ಚ್ ಸೆಂಟರ್ ಫಾರ್ ಎಕ್ಸಲೆನ್ಸ್ ವತಿಯಿಂದ ನವೆಂಬರ್ 20 ಮತ್ತು 21ರಂದು ಈ ಕಾರ್ಯಾಗಾರ ನಡೆಯಲಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಯೋಜಕತ್ವ ಇರಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ಬಾಗಲಕೋಟೆ ನಗರದ ಎಚ್ಎಸ್ಕೆ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಶನಿವಾರ ಕಾರ್ಯಾಗಾರದ ಪ್ರಚಾರ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ವೈಜ್ಞಾನಿಕ ಸಂಶೋಧನೆಯಲ್ಲಿ ಸುಧಾರಿತ ಜೈವಿಕ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸುತ್ತಿವೆ. ಇಂತಹ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೇರ ಅನುಭವದೊಂದಿಗೆ ಅರಿವು ಮೂಡಿಸುವುದು ಕಾರ್ಯಾಗಾರದ ಆಶಯವಾಗಿದೆ ಎಂದು ವಿವರಿಸಿದರು.
ಆಧುನಿಕ ಜೈವಿಕ ತಂತ್ರಜ್ಞಾನಗಳ ಅನಾವರಣಕ್ಕೆ ಬಾಗಲಕೋಟೆಯಲ್ಲಿ ರಾಷ್ಟ್ರೀಯ ಕಾರ್ಯಾಗಾರ
ನವಂಬರ್ 20, 21ರಂದು ತಜ್ಞರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ತರಬೇತಿ ರಾಷ್ಟೀಯ ಕಾರ್ಯಗಾರ.
ವೈದ್ಯಕೀಯ ಸಂಶೋಧನೆ, ಔಷಧ ಅಭಿವೃದ್ಧಿ ಹಾಗೂ ಜೀವ ವಿಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನಗಳ ಪರಿಚಯದೊಂದಿಗೆ ಪ್ರಾಯೋಗಿಕ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದ ಬಾಗಲಕೋಟೆಯಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಗಿದೆ.
ಕೋಶ ಸಂಸ್ಕೃತಿಯ ಸುಧಾರಿತ ವಿಧಾನಗಳು, ಮೂರು ಆಯಾಮದ (3ಡಿ) ಬಯೋಪ್ರಿಂಟಿಂಗ್, ವಿವಿಧ ಬಗೆಯ ಕೋಶಗಳನ್ನು ವಿಶ್ಲೇಷಿಸಲು ನೆರವಾಗುವ ಫ್ಲೋ ಸೈಟೋಮೆಟ್ರಿ ಹಾಗೂ ಔಷಧ ಸಂಶೋಧನೆಯಲ್ಲಿ ಉಪಯೋಗಿಸುವ ಕ್ಯೂಪಿಸಿಆರ್ ತಂತ್ರಜ್ಞಾನಗಳ ಕುರಿತು ಕಾರ್ಯಾಗಾರದಲ್ಲಿ ಗಮನ ಹರಿಸಲಾಗುತ್ತದೆ.
ಪ್ರಯೋಗಾಲಯಗಳಲ್ಲಿ ಬಳಕೆಯಾಗುವ ಆಧುನಿಕ ತಂತ್ರಜ್ಞಾನಗಳ ಕಾರ್ಯವಿಧಾನ, ಅವುಗಳ ಸಂಶೋಧನಾ ಉಪಯೋಗ ಹಾಗೂ ಪ್ರಾಯೋಗಿಕ ಅನ್ವಯಗಳ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಾಗಾರ ನೆರವಾಗಲಿದೆ. ಜೀವ ವಿಜ್ಞಾನ ಮತ್ತು ಔಷಧ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವಿಜ್ಞಾನಾಸಕ್ತರಿಗೆ ಇದು ಉಪಯುಕ್ತ ವೇದಿಕೆಯಾಗಲಿದೆ.
ಬಾಗಲಕೋಟೆಯ ಬಿವಿವಿಎಸ್ ಹಳೆಯ ಕ್ಯಾಂಪಸ್ನಲ್ಲಿರುವ ಎಚ್ಎಸ್ಕೆ ಕಾಲೇಜ್ ಆಫ್ ಫಾರ್ಮಸಿಯ ಮೊದಲ ಮಹಡಿಯಲ್ಲಿರುವ ಬಿವಿವಿಎಸ್ ರಿಸರ್ಚ್ ಸೆಂಟರ್ ಫಾರ್ ಎಕ್ಸಲೆನ್ಸ್ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಬಿವಿವಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಇತರರು ಉಪಸ್ಥಿತರಿದ್ದರು.





