ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಡಳಿತದಲ್ಲಿನ ಲೋಪಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ವೇಳೆ ಸಿಬ್ಬಂದಿಯೊಬ್ಬರ ಮೊಬೈಲ್‌ನಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಆ ಹಣ ಯಾವ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಸಮಗ್ರವಾಗಿ ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹಣ ವರ್ಗಾವಣೆ ನಡೆದ ಮೊಬೈಲ್ ಅನ್ನು ಪರಿಶೀಲಿಸಿದ ಅವರು, ಅದರಲ್ಲಿರುವ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿದರು.
ಕಚೇರಿಯಲ್ಲಿ “ಸಾರ್ವಜನಿಕರಿಗೆ ಪ್ರವೇಶವಿಲ್ಲ”, “ಮೊಬೈಲ್ ನಿಷೇಧ” ಎಂಬ ಫಲಕಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಇಂತಹ ಫಲಕಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಿದರು. “ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಳ್ಳಲು ಕಚೇರಿಗೆ ಬರಲೇಬೇಕು. ಅವರನ್ನು ತಡೆಯುವುದು ಸರಿಯಲ್ಲ. ಜನರ ಅಹವಾಲುಗಳನ್ನು ಆಲಿಸಿ, ಸ್ಪಂದಿಸುವ ಮನೋಭಾವ ಅಧಿಕಾರಿಗಳಲ್ಲಿ ಇರಬೇಕು” ಎಂದು ಹೇಳಿದರು.
ಬಳಿಕ ಬಾಗಲಕೋಟೆ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರಿಂದ ಕಮಿಷನ್ ವಸೂಲಿ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರೈತರಿಗೆ ಅನುಕೂಲವಾಗುವಂತೆ ಇನ್ನು ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ಹರಾಜು ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವೈದ್ಯರ ಕೊರತೆ, ಅಗತ್ಯ ಯಂತ್ರೋಪಕರಣಗಳ ಅಭಾವ ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಅವರ ಗಮನಕ್ಕೆ ಬಂತು. ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಭೇಟಿ ನೀಡಿದಾಗ ಕಚೇರಿಯಲ್ಲಿ ಕೇವಲ ಒಬ್ಬ ಅಧಿಕಾರಿ ಮಾತ್ರ ಹಾಜರಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ಅವರು, ಸಿಬ್ಬಂದಿ ಹಾಜರಾತಿ ಹಾಗೂ ಕಚೇರಿ ಕಾರ್ಯನಿರ್ವಹಣೆಯನ್ನು ಸಮರ್ಪಕಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು, ಸಾರ್ವಜನಿಕ ಸೇವೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.





