ಬಾಲಿವುಡ್ ಖ್ಯಾತ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಖಾಸಗಿ ವಾಹಿನಿಯಲ್ಲಿ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ಬಡಕುಟುಂಬದ 22 ರ ಹರೆಯದ ಯುವಕ ರಮಜಾನ್ ಮಲಿಕ್ ಸಾಬ ಫಿರಜಾದೆ ಭಾಗವಹಿಸಿ 50 ಲಕ್ಷ ರೂಪಾಯಿಗಳನ್ನು ಗೆದಿದ್ದಾರೆ.
ಚಿಮ್ಮಡಗಲ್ಲಿಯ ಬಡಕುಟುಂಬದ ರಮಜಾನ ತಂದೆ ಮಲ್ಲಿಸಾಬಸಾಬ-ಮುನೇರಾ ದಂಪತಿಯ ಸುಪುತ್ರ. ಇವರ ತಂದೆ ಗೋಕಾಕ ರಸ್ತೆಯಲ್ಲಿ ಗ್ಯಾರೇಜ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಾರೆ. ಗ್ಯಾಸ್ ವೆಲ್ಡರ್ ಕೆಲಸದ ಆದಾಯದಲ್ಲಿ ಮಕ್ಕಳ ಶಿಕ್ಷಣ ಮತ್ತು ಮನೆ ನಿರ್ವಹಣೆ ಮಾಡುತ್ತಿದ್ದಾರೆ. ರಮಜಾನಗೆ ಒಬ್ಬ ತಮ್ಮ, ಇಬ್ಬರು ತಂಗಿಯರಿದ್ದಾರೆ.
ಕಾರ್ಯಕ್ರಮದಲ್ಲಿ ಹದಿನಾಲ್ಕು ಜಟೀಲ ಪ್ರಶ್ನೆಗಳಿಗೆ ಉತ್ತರಿಸಿ, ಕೊನೆಯ 15ನೇ ಪ್ರಶ್ನೆಗೆ ಜಾಣ್ಮೆಯ ಕ್ವಿಟ್ ಪಡೆದು ಅಗ್ರ ಶ್ರೇಯಾಂಕದ ಒಂದು ಕೋಟಿ ಸಿಗದೇ ಹೋದರೂ 50 ಲಕ್ಷ ಮೊತ್ತದ ಚೆಕ್ ಪಡೆದುಕೊಂಡಿದ್ದಾರೆ. ಸಂದರ್ಭದಲ್ಲಿ ನಟ ಅಮಿತಾಬ್ ಅವರು ರಮಜಾನ್‌ಗೆ ಶುಭ ಹಾರೈಸಿ ಕೆಬಿಸಿ ನೀಡಿರುವ ಹಣದಿಂದ ಸುಭದ್ರ ಬದುಕು ಕಟ್ಟಿಕೊಂಡು ಹಣವನ್ನು ಸದುಪಯೋಗ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ರಮಜಾನ್ ಭಾಗವಹಿಸಿದ ಕಾರ್ಯಕ್ರಮ ಮುಂದಿನ ವಾರದ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.
ಇದನ್ನು ಓದಿದ್ದೀರಾ?: ಹೋಗಿ ರಣಜಿ ಕ್ರಿಕೆಟ್ ಆಡಿ: ವಿರಾಟ್, ರೋಹಿತ್ ವಿರುದ್ಧ ರವಿ ಶಾಸ್ತ್ರಿ ಕಿಡಿ
ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಎರಡು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಮೂರನೇ ಬಾರಿಯ ಪ್ರಯತ್ನದಲ್ಲಿ ಆಯ್ಕೆಯಾದ ರಮಜಾನ್ ಜ.10ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಟ್ ಸೀಟ್ ಅಲಂಕರಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದರು.
ರಮಜಾನ ಅವರು ಚಿಕ್ಕಂದಿನಿಂದಲೂ ಬಡತನದಲ್ಲಿಯೇ ಬೆಳೆದ ಹುಡುಗ. ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್‌ಸಿ ಪದವಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ ರಮಜಾನ ಪಟ್ಟಣದ ಎಸ್.ಎಚ್ ಮೆಳವಂಕಿ ಅವರ ಆಕಾಶ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾನೆ. ಸದ್ಯ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದಾರೆ.
ಮನೆಯ ಆರ್ಥಿಕ ಪರಿಸ್ಥಿತಿ ಕಠಿಣವಾಗಿದ್ದರೂ ಪಟ್ಟಣದ ಹೋಟೆಲ್ ಒಂದರಲ್ಲಿ ನಿತ್ಯ 5 ಗಂಟೆಗಳ ಕಾಲ ಸರ್ವಿಸ್ ಕೆಲಸ ಮತ್ತು ರಾತ್ರಿ ವೇಳೆ ಪಟ್ಟಣದ ಕೆಎಲ್ಇ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ವಾಚಮನ್ ಆಗಿ ಕೆಲಸ ಮಾಡಿ ಬರುವ ಹಣದಲ್ಲಿಯೇ ಶಾಲೆ ಮತ್ತು ಸ್ವಂತ ಖರ್ಚನ್ನು ನೋಡಿಕೊಂಡು ಓದು ಮುಂದುವರೆಸಿದ್ದಾರೆ.
