ಸಹಪಾಠಿಗಳ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ.
ಗುಳೇದಗುಡ್ಡದ ಎಸ್ ಎಂ ಭಂಡಾರಿ ಕಾಲೇಜಿನ ಅಂಜಲಿ ಮುಂಡಾಸ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಅಂಜಲಿ ಮುಂಡಾಸ್ ಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು.
ಡೆತ್ ನೋಟ್ ಬರೆದು ಮನೆಯಲ್ಲಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್ ನೋಟ್ನಲ್ಲಿ ಆಕೆಯ ಸಹಪಾಠಿ ವರ್ಷ ಮತ್ತು ಪ್ರದೀಪ್ ವಿರುದ್ದ ಕಿರುಕುಳ ಆರೋಪ ಮಾಡಿದ್ದಾಳೆ.
“ನನ್ನನ್ನು ಮಾನಸಿಕವಾಗಿ ವರ್ಷ ಮತ್ತು ಪ್ರದೀಪ್ ಕುಗ್ಗಿಸಿದ್ದಾರೆ. ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಮ್ಮನೆ ಬಿಡಬಾರದು. ನನ್ನ ಸಾವಿಗೆ ಇವರೇ ಕಾರಣರಾಗಿದ್ದಾರೆ” ಎಂದು ಡೆತ್ ನೋಟ್ ನಲ್ಲಿ ವಿದ್ಯಾರ್ಥಿನಿ ಉಲ್ಲೇಖಿಸಿದ್ದಾಳೆ” ಎಂದು ಪೊಲೀಸರು ತಿಳಿಸಿದ್ದಾರೆ.
ಗುಳೇದಗುಡ್ಡ ಠಾಣೆಯ ಪಿಎಸ್ಐ ಸಿದ್ದು ಯಡಹಳ್ಳಿ ಈ ದಿನ.ಕಾಂ ಜೊತೆ ಮಾತನಾಡಿ, “ವಿದ್ಯಾರ್ಥಿನಿ ಅಂಜಿಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಸಲಾಗುತ್ತಿದ್ದು, ಸದ್ಯಕ್ಕೆ ಯಾರ ಬಂಧನವೂ ಆಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಸಹಪಾಠಿಗಳ ಕಿರುಕುಳಕ್ಕೆ ಬೇಸತ್ತು ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಹೇಳಿದರು.
ನೆನಪಿಡಿ:
ಮಾನಸಿಕ ಒತ್ತಡಕ್ಕೆ ಒಳಗಾಗಿರುವವರು ಹಾಗೂ ತಮ್ಮ ಸಮಸ್ಯೆಗಳನ್ನು ಹೊರಗಿನವರೊಂದಿಗೆ ಹಂಚಿಕೊಳ್ಳಲು ಬಯಸದವರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಖಿನ್ನತೆ ಆತ್ಮಹತ್ಯೆ ಆಲೋಚನೆ ಸೇರಿದಂತೆ ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಗೂ ಟೆಲಿಮನಸ್ ಸಹಾಯವಾಣಿಯಲ್ಲಿ ಸಲಹೆ-ಸೂಚನೆಗಳನ್ನು ನೀಡಲಾಗುತ್ತದೆ. ಅಲ್ಲದೆ ಸಹಾಯವಾಣಿಗೆ ಕರೆ ಮಾಡುವವರ ಗುರುತನ್ನು ಗೋಪ್ಯವಾಗಿಡಲಾಗುತ್ತದೆ.
ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.