ಮನೆಯಲ್ಲಿ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮಹಿಳೆಯ ಎರಡು ಮುಂಗೈ ಬೆರಳುಗಳು ಛಿದ್ರಗೊಂಡಿರುವ ಭಯಾನಕ ಘಟನೆ ಇಳಕಲ್ ನಗರದಲ್ಲಿ ನಡೆದಿದೆ.
ಬಸವನಗರದ ನಿವಾಸಿ ಶಶಿಕಲಾ ಎನ್ನುವವರ ವಿಳಾಸ ನೀಡಿ ರಕ್ಕಸಗಿ ಗ್ರಾಮದ ಬಸವರಾಜೇಶ್ವರಿ ಯರನಾಳ ಎಂಬುವವರು ಆನ್‌ಲೈನ್ ಮೂಲಕ ಹೇರ್ ಡ್ರೈಯರ್ ಖರೀದಿಸಿದ್ದರು. ಪಾರ್ಸೆಲ್ ಓಪನ್ ಮಾಡಿ ಸ್ವಿಚ್ ಆನ್ ಮಾಡಿದ ಕೂಡಲೇ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ.
ಮಹಿಳೆ ಬಸವರಾಜೇಶ್ವರಿ ಯರನಾಳ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇರ್ ಡ್ರೈಯರ್ ಬ್ಲಾಸ್ಟ್‌ನಿಂದ ಮುಂಗೈ ಹಾಗೂ ಬೆರಳುಗಳು ಛಿದ್ರ ಛಿದ್ರವಾಗಿ, ಮನೆಯಲ್ಲಿ ರಕ್ತ ಚೆಲ್ಲಾಡಿದೆ. ಘಟನೆಯಲ್ಲಿ ಎರಡು ಕೈಗಳ 8 ಬೆರಳುಗಳನ್ನು ಮಹಿಳೆ ಕಳೆದೆಕೊಂಡಿದ್ದಾರೆ.
ಬಾಗಲಕೋಟೆ ಎಸ್ಪಿ ಅಮರನಾಥ್ ರೆಡ್ಡಿ ಅವರು ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಹೇರ್ ಡ್ರೈಯರ್ ಪ್ರಾಡಕ್ಟ್ ಮ್ಯಾನುವಲ್ನಲ್ಲಿನ ಸೂಚನೆ ಪಾಲಿಸಿಲ್ಲ. ಮ್ಯಾನುವಲ್ ಪಾಲಿಸದೇ ಆನ್ ಮಾಡಿದ್ದಕ್ಕೆ ಬ್ಲಾಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಇಳಕಲ್ ಠಾಣೆಯ ಪೊಲೀಸರು ತಜ್ಞರ ತಂಡದಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ” ಎಂದು ಹೇಳಿದ್ದಾರೆ.
ಬಸವನಗರದ ಶಶಿಕಲಾ ಎಂಬವರ ಹೆಸರಿಗೆ ಬಾಗಲಕೋಟೆಯ ಡಿಟಿಡಿಸಿ ಕೋರಿಯರ್ ಮೂಲಕ ಈ ಹೇರ್ ಡ್ರೈಯರ್ ಬಂದಿದೆ. ಕೋರಿಯರ್ ಬಾಯ್ ಶಶಿಕಲಾ ಅವರ ನಂಬರ್‌ಗೆ ಕಾಲ್ ಮಾಡಿದಾಗ, ‘ನಾನು ಊರಲ್ಲಿ ಇಲ್ಲ ಪಕ್ಕದ ಮನೆಯ ಬಸವರಾಜೇಶ್ವರಿ ಅವರ ಮನೆಯಲ್ಲಿ ಪಾರ್ಸೆಲ್ ಕೊಡಲು ಹೇಳಿದ್ದರು. ಅಲ್ಲದೇ ನಾನು ಯಾವುದೇ ಆನ್ ಲೈನ್ ಪ್ರಾಡಕ್ಟ್ ಆರ್ಡರ್ ಮಾಡಿಲ್ಲ. ಅದರಲ್ಲಿ ಏನಿದೆ’ ಎಂದು ಪ್ರಶ್ನಿಸಿದ್ದರು. ಕೋರಿಯರ್ ಪಾರ್ಸೆಲ್ ಪಡೆದ ಬಸವರಾಜೇಶ್ವರಿ ಯರನಾಳ ಅವರು ಬಾಕ್ಸ್ ತೆರೆದು ನೋಡಿದಾಗ ಹೇರ್ ಡ್ರೈಯರ್ ಇದೆ ಎಂದು ತಿಳಿಸಿದ್ದಾರೆ. ಅದೇ ವೇಳೆಗೆ ಪಕ್ಕದ ಮನೆಯವರು ಬಂದಿದ್ದು, ಆನ್ ಮಾಡಿ ತೋರಿಸಿ ಎಂದು ಕೇಳಿದಾಗ ಬಸವರಾಜೇಶ್ವರಿ ಅದನ್ನು ಆನ್ ಮಾಡಲು ವಿದ್ಯುತ್ ಸ್ವಿಚ್ ಬೋರ್ಡ್‌ಗೆ ಹಾಕಿ ಆನ್ ಮಾಡಿದ್ದರು. ಆಗ ಸ್ಪೋಟಗೊಂಡಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಭ್ರಷ್ಟ ಅಧಿಕಾರಿಯ ಮನೆಯಲ್ಲಿ ಚಿನ್ನ, ಬೆಳ್ಳಿಗಳ ರಾಶಿ: ಬೆಚ್ಚಿಬಿದ್ದ ಲೋಕಾಯುಕ್ತ ಅಧಿಕಾರಿಗಳು!
ಶಶಿಕಲಾ ಅವರು ಹೇರ್ ಡ್ರೈಯರ್ ಆರ್ಡರ್ ಮಾಡಿರಲಿಲ್ಲ. ಅವರ ಹೆಸರಿನಲ್ಲಿ ಪಾರ್ಸೆಲ್ ಹೇಗೆ ಬಂತು? ಡ್ರೈಯರ್ ಆರ್ಡರ್ ಮಾಡಿದವರು ಯಾರು, ಹಣ ಯಾರು ಸಂದಾಯ ಮಾಡಿದರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಸವರಾಜೇಶ್ವರಿ ಪತಿ ಪಾಪಣ್ಣ ಯರನಾಳ ಸೈನಿಕರಾಗಿದ್ದು, 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮೃತಪಟ್ಟಿದ್ದರು. ಸದ್ಯ ಬಸವರಾಜೇಶ್ವರಿ ಅವರು ಮಕ್ಕಳೊಂದಿಗೆ ಇಳಕಲ್ಲದಲ್ಲಿ ವಾಸಿಸುತ್ತಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯ ಮಾಹಿತಿ ಪಡೆದು, ಗಾಯಾಳುವಿಗೆ ಸಾಂತ್ವನ ಹೇಳಿದರು. ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.