ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕಾನೂನು ನೆರವು ಒದಗಿಸುವ ಉದ್ದೇಶದಿಂದ ಎಪಿಸಿಆರ್ (APCR) ಇಳಕಲ್ ಘಟಕ ರಚಿಸಿರುವ SIR ಕಾನೂನು ನೆರವು ಸಮಿತಿಯ ಸಂಚಾಲಕರಾಗಿ ಹಿರಿಯ ಮುಖಂಡ ಶರಣಪ್ಪ ಆಮದಿಹಾಳ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇಳಕಲ್ ನಗರದ ಸ್ನೇಹರಂಗ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಹೊರಗುಳಿಯುವ ಅರ್ಹ ಮತದಾರರಿಗೆ ಅಗತ್ಯ ಕಾನೂನು ಸಲಹೆ, ಮಾರ್ಗದರ್ಶನ ಹಾಗೂ ನೆರವು ಒದಗಿಸುವ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಮುಖಂಡರು, “ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯವಿರುವವರಿಗೆ ಕಾನೂನು ಸಹಾಯ ಒದಗಿಸಲು ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ” ಎಂದು ಹೇಳಿದರು.
ಸಭೆಯಲ್ಲಿ ಎಪಿಸಿಆರ್ ಕರ್ನಾಟಕ ರಾಜ್ಯ ಸಂಯೋಜಕ ಮೊಹಮ್ಮದ್ ಪೀರ್ ಲಟಗೇರಿ, ಎಪಿಸಿಆರ್ ಇಳಕಲ್ ಕಾರ್ಯದರ್ಶಿ ಅಬ್ದುಲ್ ಗಫ್ಫಾರ್ ತಹಶೀಲ್ದಾರ್, ವಕೀಲರಾದ ರಮಜಾನ್ ನಧಾಫ್ ಹಾಗೂ ದೇಸಾಯಿ ಗೌಡ ಗೌಡರ್, ಪತ್ರಕರ್ತರಾದ ಬಸವರಾಜ ನಾಡಗೌಡ, ಬಸವರಾಜ ಮಠದ, ಇಮಾಮ್ ಹುಸೇನ್ ಮುಲ್ಲಾ, ಜಾಕೀರ್ ಹುಸೇನ್ ತಾಳಿಕೋಟಿ, ಮುರ್ತುಜಾ ಬದಾಮಿ, ಮಹಾಂತೇಶ ಯಲಬುರ್ತಿ ಹಾಗೂ ಸಾಮಾಜಿಕ ಹೋರಾಟಗಾರರಾದ ನಾಗರಾಜ ಹೊಂಗಲ್, ರಾಘವೇಂದ್ರ ಧಾರವಾಡ, ಶ್ರೀಕಾಂತ್ ರಾಥೋಡ್, ಪವಾಡೆಪ್ಪಾ ಚಲವಾದಿ, ರಿಯಾಜ್ ಮಕಾಂದಾರ್, ಶಾಮೀದ್ ರೇಶ್ಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





