ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳು, ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣಾ ಕ್ಷೇತ್ರದ ಸುಧಾರಣೆಗೆ ಆಗ್ರಹಿಸಿ ಜಂತರ್ ಮಂತರ್ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ವಾಂಗ್ಚುಕ್ ಅವರೊಂದಿಗೆ ಕಳೆದ 23 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಮೂವರು ವಿದ್ಯಾರ್ಥಿ ನಾಯಕರು ತಮ್ಮ ಉಪವಾಸವನ್ನು ಮುಂದುವರೆಸಿದ್ದರು. ಅವರು ಇಂದು (ಸೋಮವಾರ-ಜುಲೈ 20) ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಸಂಸತ್ ಚಲೋ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ಎಐಎಸ್‌ಎ ನಾಯಕಾರದ ನೆಹಾ ಬೋರಾ, ಮನೀಶ್ ಕುಮಾರ್ ಹಾಗೂ ಅಮೀನ್ ಅಮಿತೋಜ್ ಅವರು 23 ದಿನಗಳಿಂದ ಉಪವಾಸ ನಡೆಸುತ್ತಿದ್ದರು. ಇಂದು, ಸಂಸದ ಮನೋಜ್ ಝಾ, ರಾಜಾರಾಮ್ ಸಿಂಗ್ ಮತ್ತು ಅಮ್ರಾ ರಾಮ್ ನೇತೃತ್ವದ ನಿಯೋಗವು ಅವರನ್ನು ಭೇಟಿ ಮಾಡಿ, ಮನವಿ ಮಾಡಿದ ಹಿನ್ನೆಲೆಯಲ್ಲಿ ಮೂವರೂ ತಮ್ಮ ಉಪವಾಸವನ್ನು ಕೊನೆಗೊಳಿಸಿದ್ದಾರೆ. ಈ ನಿಯೋಗದಲ್ಲಿ ಸಾಮಾಜಿಕ ಹೋರಾಟಗಾರ ಡಾ. ಯೋಗೇಂದ್ರ ಯಾದವ್, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಪ್ರಾಧ್ಯಾಪಕ ಅತುಲ್ ಸೂದ್ ಹಾಗೂ ನಟ ಪ್ರಕಾಶ್ ರಾಜ್ ಮತ್ತು ಶಬಾನಾ ಆಜ್ಮಿ ಕೂಡ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ ಡಾ. ಯೋಗೇಂದ್ರ ಯಾದವ್, “ಇದು ಹೋರಾಟದ ಅಂತ್ಯವಲ್ಲ; ಹೋರಾಟದ ಒಂದು ಹಂತದ ಸಮಾಪ್ತಿ ಮಾತ್ರ” ಎಂದು ಹೇಳಿದ್ದಾರೆ.
ಸಂಸದ ಮನೋಜ್ ಝಾ, “ಈ ಹೋರಾಟದ ಮೂಲಕ ಸರ್ಕಾರದ ವೈಫಲ್ಯವನ್ನು ದೇಶದ ಮುಂದೆ ತೆರೆದಿಟ್ಟಿದ್ದೀರಿ” ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ನಟಿ ಶಬಾನಾ ಆಜ್ಮಿ, “ನಿಮ್ಮ ಪೀಳಿಗೆಗೆ ನ್ಯಾಯ ಒದಗಿಸಲು ನಾವು ವಿಫಲರಾಗಿದ್ದೇವೆ. ಆದರೆ, ನೀವು ಹೋರಾಟದ ಹೊಸ ದಿಕ್ಕನ್ನು ತೋರಿಸಿದ್ದೀರಿ” ಎಂದು ಹೇಳಿದ್ದಾರೆ.
ರಾಜಾರಾಮ್ ಸಿಂಗ್, “ನಿಮ್ಮ ಧ್ವನಿ ಇನ್ನು ಮುಂದೆ ಸಂಸತ್ತಿನಲ್ಲಿಯೂ ಪ್ರತಿಧ್ವನಿಸಲಿದೆ” ಎಂದು ತಿಳಿಸಿದ್ದಾರೆ.
ಉಪವಾಸದ ಅವಧಿಯಲ್ಲಿ ಮೂವರು ವಿದ್ಯಾರ್ಥಿಗಳು ತಮ್ಮ ದೇಹದ ತೂಕದ 12%ಕ್ಕೂ ಹೆಚ್ಚು ಕಳೆದುಕೊಂಡಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಪಾಯಕಾರಿಯಾಗಿ ಕುಸಿದಿತ್ತು. ದೀರ್ಘ ಉಪವಾಸದಿಂದ ಹಲವು ಅಂಗಾಂಗಗಳ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ ಎಂದು ಎಐಎಸ್‌ಎ ತಿಳಿಸಿದೆ.
ಇದೇ ವೇಳೆ, ಮುಂಗಾರು ಅಧಿವೇಶನದ ಅವಧಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ–2020 ವಿರುದ್ಧ ದೇಶವ್ಯಾಪಿ ಒಂದು ತಿಂಗಳ ಅಭಿಯಾನ ಆರಂಭಿಸುವುದಾಗಿ ಎಐಎಸ್‌ಎ ಘೋಷಿಸಿದೆ. ಜಂತರ್ ಮಂತರ್‌ನಲ್ಲಿಯೂ ಧರಣಿ ಮುಂದುವರೆಯಲಿದೆ ಎಂದು ತಿಳಿಸಿದೆ.




