ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇದ್ದಲಗಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಬೆಂಕಿ ದುರಂತದಿಂದ ಹಾನಿಗೊಳಗಾದ ಇದ್ದಲಗಿ ಸಂತ್ರಸ್ತರ ಶೆಡ್ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಮಂಗಳವಾರ ಭೇಟಿ ನೀಡಿ, ಹಾನಿಯ ಪರಿಸ್ಥಿತಿ ಪರಿಶೀಲಿಸಿದರು. ಈ ವೇಳೆ ಸಂತ್ರಸ್ತ ಕುಟುಂಬಗಳ ನೋವು, ನಷ್ಟದ ಕಥೆ ಕೇಳಿ ಸಚಿವರು ಸಾಂತ್ವನ ಹೇಳಿದರು.
‘ಮಗಳ ಮದುವೆಗಾಗಿ ಕೂಡಿಟ್ಟಿದ್ದ ₹3 ಲಕ್ಷ, ಎರಡು ತೊಲೆ ಬಂಗಾರ ಸುಟ್ಟುಹೋಗಿದೆ’ ಎಂಬ ಸಂತ್ರಸ್ತ ಕುಟುಂಬದ ಕಣ್ಣೀರಿನ ಮಾತು ಸಚಿವರ ಮನಕಲಕಿತು. ಸಾಲ ಮಾಡಿ ಮಗಳ ಮದುವೆಗಾಗಿ ತಂದಿದ್ದ ಬಂಗಾರ ಹಾಗೂ ಮದುವೆ ಕಾರ್ಯಕ್ಕಾಗಿ ಸಂಗ್ರಹಿಸಿದ್ದ ಹಣ ಬೆಂಕಿಗೆ ಆಹುತಿಯಾಗಿದ್ದು, ಇದೀಗ ಮದುವೆ ಹೇಗೆ ಮಾಡಬೇಕು ಎಂಬುದೇ ತಿಳಿಯದಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡರು.
‘ಉಡುವ ಬಟ್ಟೆ ಸೇರಿದಂತೆ ಮನೆ ಹಾಗೂ ಜಮೀನಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳೆಲ್ಲ ಸುಟ್ಟುಹೋಗಿವೆ. ನಮ್ಮ ಬದುಕೇ ಬೀದಿಗೆ ಬಂದಿದೆ’ ಎಂದು ಮಹಿಳೆಯೊಬ್ಬರು ನೋವು ಹೇಳಿಕೊಂಡರು.
ಮತ್ತೊಬ್ಬ ಮಹಿಳೆ, ‘ಬದುಕಿಗೆ ಆಸರೆಯಾಗಿದ್ದ ಎಮ್ಮೆ ಅಗ್ನಿ ಅವಘಡದಲ್ಲಿ ಮೃತಪಟ್ಟಿದೆ. ಈಗ ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ಕಣ್ಣೀರಿಟ್ಟರು. ಶೆಡ್ಗಳಲ್ಲಿ ವಾಸವಿದ್ದ ಇತರ ಸಂತ್ರಸ್ತರೂ ಸಚಿವರ ಮುಂದೆ ತಮ್ಮ ದುಃಖ-ದುಮ್ಮಾನಗಳನ್ನು ತೋಡಿಕೊಂಡರು.
‘ನಾನು ಸಂತ್ರಸ್ತನಾಗಿ ನಿಮ್ಮ ನೋವಿಗೆ ಸ್ಪಂದಿಸಲು ಬಂದಿದ್ದೇನೆ’
ಸಂತ್ರಸ್ತರ ಅಳಲು ಆಲಿಸಿದ ಸಚಿವ ವಿಜಯಾನಂದ ಕಾಶಪ್ಪನವರ, ‘ಅಗ್ನಿ ಅವಘಡ ಅಚಾನಕ್ಕಾಗಿ ಸಂಭವಿಸಿದೆ. ನಾನು ಒಬ್ಬ ಸಂತ್ರಸ್ತನಾಗಿ ನಿಮ್ಮ ನೋವಿಗೆ ಸ್ಪಂದಿಸಲು ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.
‘2006ರಲ್ಲಿ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಳುಗಡೆ ಗ್ರಾಮಗಳನ್ನು ಘೋಷಣೆ ಮಾಡಲಾಯಿತು. 2013-18ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಪುನರ್ವಸತಿ ಕೇಂದ್ರಗಳ ಲೇಔಟ್, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹200 ಕೋಟಿ ಅನುದಾನ ನೀಡಿದ್ದಾರೆ. 2023-24ರಲ್ಲಿ ಪುನರ್ವಸತಿ ಕೇಂದ್ರಗಳ ರಸ್ತೆ ನಿರ್ಮಾಣಕ್ಕೆ ₹19 ಕೋಟಿ ನೀಡಲಾಗಿದೆ’ ಎಂದರು.
‘ಇದ್ದಲಗಿ ಗ್ರಾಮದಲ್ಲಿನ ಶೆಡ್ಗಳ ದುರಸ್ತಿಗೆ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆಯಿಂದ ₹73 ಲಕ್ಷ ಮಂಜೂರಾಗಿದ್ದು, ಈಗಾಗಲೇ ₹50 ಲಕ್ಷ ಬಿಡುಗಡೆಯಾಗಿದೆ. ಶೀಘ್ರವೇ ಶೆಡ್ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
‘ಇದ್ದಲಗಿ ಸಂಪೂರ್ಣ ಸ್ಥಳಾಂತರಕ್ಕೆ ಕ್ರಮ’
“ಸಂತ್ರಸ್ತರು ಹಲವು ವರ್ಷಗಳಿಂದ ತಾತ್ಕಾಲಿಕ ಶೆಡ್ಗಳಲ್ಲೇ ವಾಸಿಸುತ್ತಿದ್ದಾರೆ. ಮುಳುಗಡೆಯಿಂದ ಬಾಧಿತವಾಗಿರುವ ಇದ್ದಲಗಿ ಗ್ರಾಮವನ್ನು ಶೀಘ್ರದಲ್ಲಿಯೇ ಸಂಪೂರ್ಣವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಅಗ್ನಿ ಅವಘಡದಿಂದ ದವಸ-ಧಾನ್ಯ, ಬಟ್ಟೆ-ಬರೆ ಹಾಗೂ ಅಗತ್ಯ ದಾಖಲೆಗಳು ಸುಟ್ಟುಹೋಗಿವೆ. ಅಧಿಕಾರಿಗಳಿಂದ ಸಮಗ್ರ ಹಾನಿ ಪರಿಶೀಲನೆ ನಡೆಸಿದ ಬಳಿಕ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಒಂದು ಗುಂಟೆ ಬದಲು ನಾಲ್ಕು ಗುಂಟೆ ಜಾಗ
ಸಂತ್ರಸ್ತರ ಪ್ರಮುಖ ಬೇಡಿಕೆಯಾದ ನಿವೇಶನದ ವಿಚಾರದಲ್ಲೂ ಸಚಿವರು ಭರವಸೆ ನೀಡಿದರು.
“ಪ್ರತಿ ಕುಟುಂಬಕ್ಕೆ ಒಂದು ಗುಂಟೆ ಬದಲಿಗೆ ನಾಲ್ಕು ಗುಂಟೆ ಜಾಗ ನೀಡಬೇಕು ಎಂಬುದು ಸಂತ್ರಸ್ತರ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು, ಈಗಿರುವ ಆದೇಶದಲ್ಲಿ ಅಗತ್ಯ ತಿದ್ದುಪಡಿ ಮಾಡಿಸಿ ನಾಲ್ಕು ಗುಂಟೆ ಜಾಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.ಪುನರ್ವಸತಿಗಾಗಿ 15 ಸಾವಿರ ನಿವೇಶನಗಳು ಲಭ್ಯವಿದ್ದು, ನಿವೇಶನ ಹಂಚಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ಭರವಸೆ ನೀಡಿದರು.
“ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನನ್ನ ಮೇಲೆ ವಿಶ್ವಾಸವಿಟ್ಟು ಸಮಯ ಕೊಡಿ. ಬೇಡಿಕೆ ಈಡೇರಿಸದೇ ನಿಮ್ಮ ಊರಿಗೆ ಬರುವುದಿಲ್ಲ” ಎಂದು ಸಚಿವ ವಿಜಯಾನಂದ ಕಾಶಪ್ಪನವರ ಸಂತ್ರಸ್ತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ, ಜಿಲ್ಲಾ ಎಸ್ಪಿ ಸಿದ್ದಾರ್ಥ ಗೋಯಲ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಪುನರ್ವಸತಿ, ಪುನರ್ನಿರ್ಮಾಣ ಹಾಗೂ ಭೂಸ್ವಾಧೀನ ಸಮಾಲೋಚಕ ಮಹಾದೇವ ಮುರಗಿ, ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಸೇರಿದಂತೆ ಅಧಿಕಾರಿಗಳು ಇದ್ದರು.
ಹಸನಸಾಬ್ ಪಿಂಜಾರ, ಹಿರೇಮಠ, ಬಸವರಾಜ ಮುಳ್ಳೂರ, ಭೀಮಪ್ಪ ಅಡಿಹಾಳ, ಶರಣಪ್ಪ ಮುಳ್ಳೂರ, ಕಲ್ಲಪ್ಪ ಅನೇಹೊಸೂರ, ಹಬೀಬಸಾಬ ನಿಡಗುಂದಿ, ಮೀನಾಕ್ಷಿ ಗಂಜಿಹಾಳ, ಸರೋಜಮ್ಮ ಸೋಮಣ್ಣ ಪೂಜಾರಿ, ಸಿದ್ದರಾಮಪ್ಪ ದೇಸಾಯಿ, ರಂಗಪ್ಪ ತಳ್ಳಿಕೇರಿ ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರು ಭಾಗವಹಿಸಿದ್ದರು.





