ಆಂಧ್ರಪ್ರದೇಶದ ಇಲ್ಲಿನ ಪೋಲಾವರಂ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಜ್ವರ ತಪಾಸಣಾ ಶಿಬಿರದಲ್ಲಿ ಮಲೇರಿಯಾ ನಿರೋಧಕ ‘ಕ್ಲೋರೊಕ್ವಿನ್’ ಮಾತ್ರೆ ಸೇವಿಸಿದ ಪರಿಣಾಮ ಏಳು ವರ್ಷದ ಗಿರಿಜನ ಬಾಲಕಿಯೊಬ್ಬಳು ಮೃತಪಟ್ಟು, 47 ಮಕ್ಕಳು ಸೇರಿ 52ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆ ಬುಧವಾರ ನಡೆದಿದೆ.
ಮೃತ ಬಾಲಕಿಯನ್ನು ಮಡಿವಿ ಜಮುನಾ (7) ಎಂದು ಗುರುತಿಸಲಾಗಿದೆ. ಗೊಲ್ಲಗುಪ್ಪ ಗ್ರಾಮದಲ್ಲಿ ಮಂಗಳವಾರದ ವೇಳೆಗೆ ಆರು ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಈ ಮಾತ್ರೆಗಳನ್ನು ನೀಡಿದ್ದರು. ಮಾತ್ರೆ ಸೇವಿಸಿದ ಬಳಿಕ ಜಮುನಾಳ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕುಸಿದು ಆಕೆ ಪ್ರಜ್ಞೆ ತಪ್ಪಿದ್ದಾಳೆ. ತಕ್ಷಣವೇ ಆಕೆಯನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಪೋಲಾವರಂ ಜಿಲ್ಲಾಧಿಕಾರಿ ಕೆ. ದಿನೇಶ್ ಕುಮಾರ್ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 54 ಮಂದಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಇವರಲ್ಲಿ ಪ್ರಸ್ತುತ 48 ಮಕ್ಕಳು ಮತ್ತು ಐವರು ವಯಸ್ಕರು ಸೇರಿದಂತೆ 53 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ, ಗ್ರಾಮದಲ್ಲಿಯೇ ತೆರೆಯಲಾಗಿರುವ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಇನ್ನೂ 17 ಮಂದಿ ಗ್ರಾಮಸ್ಥರಿಗೆ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದ್ದು, ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ವಿತರಿಸಲಾದ ಕ್ಲೋರೊಕ್ವಿನ್ ಮಾತ್ರೆಗಳ ಗುಣಮಟ್ಟದ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ತೃಪ್ತಿದಾಯಕವಾಗಿ ಬಂದಿದೆ. ಆದರೂ, ಸಾವಿಗೆ ನಿಖರ ಕಾರಣ ತಿಳಿಯಲು ಗ್ರಾಮದಲ್ಲಿ ವಿತರಿಸಲಾದ ನಿರ್ದಿಷ್ಟ ಬ್ಯಾಚ್ನ ಮಾತ್ರೆಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ವಿಶಾಖಪಟ್ಟಣದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ. ಪ್ರಾಥಮಿಕ ವೈದ್ಯಕೀಯ ವರದಿಗಳ ಪ್ರಕಾರ, ಮೃತ ಬಾಲಕಿ ಜಮುನಾಳಿಗೆ ಮೊದಲೇ ಆನುವಂಶಿಕ ಹೃದಯ ಸಂಬಂಧಿ ಕಾಯಿಲೆ ಇದ್ದಿರಬಹುದು ಮತ್ತು ಅಂತಹ ಸ್ಥಿತಿಯಲ್ಲಿ ಕ್ಲೋರೊಕ್ವಿನ್ ಸೇವನೆಯು ಆಕೆಯ ‘ಕಾರ್ಡಿಯಾಕ್ ಅರಿಥ್ಮಿಯಾ’ಗೆ (ಹೃದಯ ಬಡಿತದ ತೀವ್ರ ಏರುಪೇರು) ಕಾರಣವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಆದರೆ, ಅಂತಿಮ ಕ್ಲಿನಿಕಲ್ ವರದಿ ಬಂದ ಬಳಿಕವಷ್ಟೇ ಇದು ದೃಢಪಡಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಜನರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಮತ್ತು ಜಿಲ್ಲಾಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಮಂಗಳವಾರ ರಾತ್ರಿಯೇ ಘಟನೆಯ ಬಗ್ಗೆ ಪರಾಮರ್ಶೆ ನಡೆಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಅಸ್ವಸ್ಥರಾದವರಿಗೆ ತ್ವರಿತವಾಗಿ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ನೆರವು ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.





