ಬಾಗಲಕೋಟೆ ನಗರದಲ್ಲಿನ 18 ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಅಕ್ರಮ ವ್ಯವಹಾರ ಮತ್ತು ಸಾರ್ವಜನಿಕ ಸೇವೆಯಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆ 17 ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಉಪಲೋಕಾಯುಕ್ತ ಬಿ. ವೀರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಎಂಸಿ, ನಗರಸಭೆ, ಜಿಲ್ಲಾ ಆಸ್ಪತ್ರೆ, ಸಬ್‌ರಿಜಿಸ್ಟ್ರಾರ್ ಕಚೇರಿ, ಎಡಿಎಲ್‌ಆರ್ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ಕಂಡುಬಂದ ಲೋಪಗಳ ಆಧಾರದ ಮೇಲೆ 17 ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ರಾಕೇಶ ಚಲವಾದಿ ಅವರ ಮೊಬೈಲ್ ಪರಿಶೀಲಿಸಿದಾಗ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ. ಅದೇ ರೀತಿ ಉಪವಿಭಾಗಾಧಿಕಾರಿ ಕಚೇರಿಯ ರಂಜಿತಾ ಅವರ ಖಾತೆಯಲ್ಲೂ ಆದಾಯಕ್ಕಿಂತ ಹೆಚ್ಚಿನ ಹಣಕಾಸು ವಹಿವಾಟು ನಡೆದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರಾಕೇಶ್ ಚಲವಾದಿ, ರಂಜಿತಾ ಸೇರಿದಂತೆ ಲಕ್ಷ್ಮಿ ಹಾಗೂ ಅನುಸೂಯಾ ಅವರ ಕಳೆದ ಎರಡು ವರ್ಷದ ಬ್ಯಾಂಕ್ ವ್ಯವಹಾರಗಳ ವಿವರ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.
ಇದೇ ವೇಳೆ ಸಾರಿಗೆ ಇಲಾಖೆ ಕಚೇರಿಯ ಕಾರ್ಯವೈಖರಿಯ ಮೇಲೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಲವು ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ನೀಡದೇ ಇದ್ದರೂ ಅವುಗಳಿಗೆ ವಿಮೆ ಮಾಡಿಸಿರುವ ವಿಚಾರ ಗಂಭೀರವಾಗಿದೆ.
ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ವಾಹನ ಸಂಚಾರಕ್ಕೆ ಅವಕಾಶವಿಲ್ಲದಿದ್ದರೆ, ಅಂತಹ ವಾಹನಗಳಿಗೆ ವಿಮೆ ಹೇಗೆ ಮಾಡಲಾಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಪರಿಶೀಲನೆ ವೇಳೆ ಕಂಡುಬಂದ ಪ್ರತಿಯೊಂದು ಅಂಶವನ್ನು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ ನೀಡಿದರು.





