ಪರೀಕ್ಷಾ ಅಕ್ರಮಗಳ ವಿರುದ್ಧದ ಕಾಕ್ರೋಚ್‌ಗಳ ಪ್ರತಿಭಟನೆಗೆ ಮೊದಲ ಗೆಲುವು ಸಂದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಶನಿವಾರ ಸಂಜೆ 6 ಗಂಟೆಗೆ ದೆಹಲಿಯ ಜಂತರ್ ಮಂತರ್‌ನಿಂದ ಶಾಂತಿಯುತ ‘ಮೆಣದಬತ್ತಿ ಮೆರವಣಿಗೆ’ಗೆ ಕರೆ ಕೊಟ್ಟಿದೆ.
ನೀಟ್ ಪರೀಕ್ಷಾ ವೈಫಲ್ಯಗಳು, ಪತ್ರಿಕೆ ಸೋರಿಕೆಯಿಂದಾಗಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದು, ಜುಲೈ 20ರಂದು ಸಂಸತ್ ಚಲೋ ವೇಳೆ ನಡೆದ ಲಾಠಿಚಾರ್ಜ್ ನಂತರವೂ ವಿದ್ಯಾರ್ಥಿಗಳ ಒಗ್ಗಟ್ಟು ಪ್ರದರ್ಶನ ಹಾಗೂ ಮುಖ್ಯ ಬೇಡಿಕೆಗಳಲ್ಲಿ ಬಾಕಿ ಇರುವ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಎಲ್ಲ ಕಾನೂನು ಪ್ರಕರಣಗಳ ರದ್ದತಿಗಾಗಿ ಸರ್ಕಾರದ ಮೇಲೆ ಒತ್ತಡ ತರಲು ಈ ‘ಮೇಣದಬತ್ತಿ ಮೆರವಣಿಗೆ’ಗೆ ಕರೆಕೊಡಲಾಗಿದೆ ಎಂದು ಸಿಜೆಪಿ ಹೇಳಿದೆ.
“ನಮ್ಮ ಮೊದಲ ಹಂತದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಆದರೆ, ಈ ಹೋರಾಟವು ಕೇವಲ ಒಬ್ಬ ವ್ಯಕ್ತಿಯ ರಾಜೀನಾಮೆಗೆ ಸೀಮಿತವಲ್ಲ; ಇದು ದೇಶದ ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆ ಮತ್ತು ಯುವಕರ ಭವಿಷ್ಯದ ರಕ್ಷಣೆಗಾಗಿ ನಡೆಯುತ್ತಿರುವ ಜನಾಂದೋಲನ. ಇಂದು ಸಂಜೆ 6 ಗಂಟೆಗೆ ಪ್ರತಿಯೊಬ್ಬರೂ ಕೈಯಲ್ಲಿ ಮೆಣದಬತ್ತಿ ಮತ್ತು ತ್ರಿವರ್ಣ ಧ್ವಜ ಹಿಡಿದು ಶಾಂತಿಯುತವಾಗಿ ಸಾಗೋಣ. ಯಾವುದೇ ಪ್ರಚೋದನೆಗೆ ಒಳಗಾಗದೆ, ಅಹಿಂಸಾತ್ಮಕವಾಗಿ ನಮ್ಮ ಧ್ವನಿಯನ್ನು ಎತ್ತಿಹಿಡಿಯೋಣ” ಎಂದು ಸಿಜೆಪಿ ನಾಯಕರು ಕರೆ ಕೊಟ್ಟಿದ್ದಾರೆ.




