ಕಳೆದ ಕೆಲ ದಿನಗಳಿಂದ ಸುರಿದ ಭರ್ಜರಿ ಮಳೆಗೆ ಬಾಗೇಪಲ್ಲಿ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಚಿತ್ರಾವತಿ ಜಲಾಶಯ ತುಂಬಿ ಹರಿಯುತ್ತಿದ್ದು, ಪಟ್ಟಣ ಮತ್ತು ಸುತ್ತಮುತ್ತಲಿನ ಜನರ ಮೊಗದಲ್ಲಿ ಸಂತಸ ಮೂಡಿದೆ.
ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿಯ ಪರಗೋಡು ಸಮೀಪದಲ್ಲಿ ನಿರ್ಮಾಣ ಮಾಡಿರುವ ಚಿತ್ರಾವತಿ ಜಲಾಶಯ ಕಳೆದ ವರ್ಷ ಮಳೆಯ ಕೊರತೆಯಿಂದ ತುಂಬಿರಲಿಲ್ಲ. ಇದೀಗ ತಾಲೂಕಿನ ಬಹುತೇಕ ಎಲ್ಲೆಡೆ ಮತ್ತು ಚಿತ್ರಾವತಿ ಜಲಾನಯನ ಪ್ರದೇಶದಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿ ತುಂಬಿ ಹರಿಯುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರಾವತಿ ಜಲಾಶಯವನ್ನು ವೀಕ್ಷಿಸಲು ತಂಡೋಪ ತಂಡವಾಗಿ ನಾಗರೀಕರು ಹೋಗುತ್ತಿದ್ದಾರೆ.

ಒಮ್ಮೆ ಚಿತ್ರಾವತಿ ಜಲಾಶಯ ತುಂಬಿ ಹರಿದರೆ ಕನಿಷ್ಠ 2 ವರ್ಷದವರೆಗೆ ಬಾಗೇಪಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎಂಬುದು ಸುತ್ತಮುತ್ತಲಿನ ಜನರು ಹಾಗೂ ರೈತರ ಸಂತಸಕ್ಕೆ ಪ್ರಮುಖ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಈ ಕುರಿತು ಪ್ರತಿಕ್ರಿಯಿಸಿರುವ ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಚಿತ್ರಾವತಿ ಜಲಾಶಯ ತುಂಬಿ ಹರಿದಿದ್ದು ಎಲ್ಲರಲ್ಲೂ ಸಂತಸ ತಂದಿದೆ. ಪ್ರಮುಖವಾಗಿ ಬಾಗೇಪಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಭರ್ತಿಯಾಗಿರುವುದರಿಂದಾಗಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಶುಕ್ರವಾರ ಪುರಸಭೆಯ ವತಿಯಿಂದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರ ನೇತೃತ್ವದಲ್ಲಿ ಬಾಗೀನವನ್ನು ಅರ್ಪಿಸಲಾಗುತ್ತದೆ ಎಂದರು.
- ವರದಿ : ರಾ.ನ.ಗೋಪಾಲ ರೆಡ್ಡಿ, ಪತ್ರಕರ್ತ, ಬಾಗೇಪಲ್ಲಿ.