ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡಿ, ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಬಾಗೇಪಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು.
ಈ ವೇಳೆ ತಾಲೂಕು ಘಟಕದ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಸರಕಾರವು ಮೊಬೈಲ್ ಆ್ಯಪ್‌ಗಳ ಮೂಲಕ ಲ್ಯಾಂಡ್ ಬಿಟ್ , ಆಧಾರ್ ಸಂಖ್ಯೆ ಸಂಯೋಜನೆ ಸೇರಿದಂತೆ ನಾನಾ ಕೆಲಸಗಳನ್ನು ನಿಗದಿಪಡಿಸಲಾಗಿದೆ. ಇಂತಹ ಕೆಲಸಗಳನ್ನು ನಿರ್ವಹಿಸಲು ಕನಿಷ್ಟ ಸೌಲಭ್ಯಗಳನ್ನೂ ಒದಗಿಸಿಲ್ಲ. ಲ್ಯಾಪ್‌ಟಾಪ್, ಇಂಟರ್‌ನೆಟ್ ಸೌಲಭ್ಯ, ಪೀಠೋಪಕರಣಗಳ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸದೇ ಕಾರ್ಯದೊತ್ತಡ ಹೇರಲಾಗುತ್ತಿದೆ. ಹಾಗಾಗಿ, ರಾಜ್ಯ ಸಂಘಟನೆಯ ನಿರ್ಧಾರಂತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಗ್ರಾಮ ಆಡಳಿತ ಅಧಿಕಾರಿ ಪ್ರೀತಮ್ ಮಾತನಾಡಿ, ಬಗರ್ ಹುಕುಂ ಸಾಗುವಳಿ, ಭೂಮಿ, ಹಕ್ಕುಪತ್ರ, ಆಧಾರ್ ಸೀಡಿಂಗ್, ಚುನಾವಣೆ, ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಕೆಲಸಗಳನ್ನು ಸೇರಿದಂತೆ 21 ಮೊಬೈಲ್ ತಂತ್ರಾಂಶಗಳನ್ನು ನಿರ್ವಹಣೆ ಮಾಡಬೇಕಿದೆ. ಇವೆಲ್ಲವನ್ನು ಒಟ್ಟಿಗೆ ನಿರ್ವಹಿಸುವುದು ಕಷ್ಟಕರವಾಗಿದೆ. ಅಂತರ ಜಿಲ್ಲಾ ವರ್ಗಾವಣೆ, ಪತಿ–ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಮೂಲಕ ಸುಲಿಗೆ: ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮನೀಷಾ ಮಹೇಶ್ ಪತ್ರಿಯವರು, ಕೂಡಲೇ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕೆ ತರುತ್ತೇವೆ. ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆಯ ಅಡಿಗಲ್ಲುಗಳಿದ್ದಂತೆ. ಹಾಗಾಗಿ ಸರಕಾರದ ಯೋಜನೆಗಳ ಅನುಷ್ಟಾನದಲ್ಲಿ ಅವರ ಪಾತ್ರ ಮುಖ್ಯವಾದದ್ದು ಎಂದು ತಿಳಿಸಿದರು.
ಈ ವೇಳೆ ಗ್ರಾಮ ಆಡಳಿತಾಧಿಕಾರಿಗಳಾದ ಬಿ.ಸಿ ನರಸಿಂಹಪ್ಪ, ರೋಶಿನಿ, ಅಭಿಷೇಕ್, ಸಂತೋಷ್ ಕುಮಾರ್, ಕೆ.ಎನ್ ವೇಣುಗೋಪಾಲ್, ಕಿರಣ್, ಪ್ರಿಯಾಂಕ, ಕೀರ್ತಿ, ರಂಜಿತಾ, ಈಶ್ವರ್, ಮಾಳಪ್ಪ, ಜಕ್ಕು, ವೆಂಕಟೇಶ್, ಶ್ರೀಧರ್, ಯಶೋಧ ಮತ್ತು ಜಯರಾಮ್ ಸೇರಿದಂತೆ ಹಲವಾರು ಮಂದಿ ಇದ್ದರು.
