ಕರ್ನಾಟಕ ರಾಜ್ಯದಿಂದ ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಾಟ ನಿರ್ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಯಚೂರು ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಕೃಷ್ಣ ಮೇಲ್ಸೇತುವೆ(ಬ್ರಿಜ್) ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
“ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಿಂದ ಭತ್ತದ ವ್ಯಾಪಾರಿಗಳು ತೆಲಂಗಾಣ ರಾಜ್ಯಕ್ಕೆ ಹೋಗುವಾಗ ಶಕ್ತಿನಗರ ಚೆಕ್‌ಪೋಸ್ಟ್ ನಲ್ಲಿ ಹಾಗೂ ಯಾದಗಿರಿ ಜಿಲ್ಲೆಯ ಜಲಾಲ್‌ಪೂರ ಚೆಕ್ ಪೋಸ್ಟ್ ನಲ್ಲಿ ಭತ್ತದ ಲಾರಿಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ದೂರಿದರು.
ಬೆಳಿಗ್ಗೆಯೇ ರೈತರು ರಸ್ತೆ ತಡೆ ಮಾಡಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಯಿತು. ತೆಲಂಗಾಣದ 50ಕ್ಕೂ ಅಧಿಕ ಭತ್ತದ ವಾಹನಗಳನ್ನು ತಡೆದು ವಾಪಸ್ ಕಳಿಸಿದರು. ಪ್ರತಿಭಟನೆಯ ಮಾಹಿತಿ ಪಡೆದು ರಾಯಚೂರು ಎಪಿಎಂಸಿ ಅಧಿಕಾರಿ ಆದೆಪ್ಪಗೌಡ ಸ್ಥಳಕ್ಕೆ ಆಗಮಿಸಿ ಸಮಸ್ಯೆಯ ಕುರಿತು ತೆಲಂಗಾಣ ಸರ್ಕಾರದ ಜತೆ ಮಾತನಾಡಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
“ಪ್ರತಿದಿನ ತೆಲಂಗಾಣ ರಾಜ್ಯದಿಂದ ರಾಯಚೂರು ಮಾರುಕಟ್ಟೆಗೆ 30ರಿಂದ 40 ಸಾವಿರ ಕ್ವಿಂಟಲ್ ಭತ್ತ ಯಾವುದೇ ನಿರ್ಬಂಧವಿಲ್ಲದೆ ಆವಕವಾಗುತ್ತಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯ ಭತ್ತದ ದರ ಕಡಿಮೆಯಾಗಿದ್ದು, ರೈತರಿಗೆ ನಷ್ಟವಾಗುತ್ತಿದೆ” ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಸಮಸ್ಯೆ ವಿವರಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ, ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ, ಪದಾಧಿಕಾರಿಗಳಾದ ಮಲ್ಲಣ್ಣ ಗೌಡೂರು, ಮಲ್ಲಿಕಾರ್ಜುನರಾವ್, ರೈತ ಮುಖಂಡರು, ವ್ಯಾಪಾರಿ ವೆಂಕಟೇಶ ಇದ್ದರು.
