ಬೆಂಗಳೂರಿನಲ್ಲಿ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ರೌಡಿಶೀಟರ್ ಪವನ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಸಂತ್ರಸ್ತ ಯುವಕ ವಿಶ್ವಾಸ್ ಎಂಬಾತ ರೌಡಿಶೀಟರ್ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಇದನ್ನು ತಿಳಿದ ಪವನ್, ಯುವಕನನ್ನು ಬೆತ್ತಲೆಗೊಳಿಸಿದ್ದ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ಪವನ್‌ನನ್ನು ಬೆಂಗಳೂರಿನ ಗೋವಿಂದರಾಜನಗರ ಪೊಲೀಸರು ತುಮಕೂರಿನಲ್ಲಿ ಬಂಧಿಸಿದ್ದಾರೆ. ಆತನ ಕಾಲಿಗೆ ಗುಂಡೇಟು ಬಿದ್ದಿರುವುದರಿಂದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಯುವಕ ವಿಶ್ವಾಸ್ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದ ಪವನ್ ತನ್ನ ಮೊಬೈಲ್ಅನ್ನು ಸ್ವಿಚ್‌ಆಫ್ ಮಾಡಿಕೊಂಡಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ, ಹಣಕ್ಕಾಗಿ ರಾತ್ರಿ ವೇಳೆ ವಾಹನಗಳಲ್ಲಿ ಬರುವವರನ್ನು ಅಡ್ಡಗಟ್ಟಿ ರಾಬರಿ ಮಾಡಲು ತಂತ್ರ ಎಣೆದಿದ್ದ, ಪವತ್, ಮಂಗಳವಾರ ಮುಂಜಾನೆ ತನ್ನ ಮೊಬೈಲ್ ಆನ್ ಮಾಡಿದ್ದಾನೆ. ಕೂಡಲೇ ನೆಟ್‌ವರ್ಕ್ ಆಧಾರದ ಮೇಲೆ ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು ಆತನಿಂದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ, ಕಾನ್ಸ್ಟೇಬಲ್ ವೆಂಕಟೇಶ್ ಎಂಬವರ ಮೇಲೆ ಆರೋಪಿ ಪವನ್ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ. ಇನ್ಸ್‌ಪೆಕ್ಟರ್ ಸುಬ್ರಮಣ್ಯ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಆಗ ಆರೋಪಿಯ ಕಾಲಿಗೆ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಿದ್ದಾರೆ.