ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ ಕಳೆದ ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರದ ಜತೆಗೆ 25 ಲಕ್ಷ ಅಮೆರಿಕನ್ ಡಾಲರ್ ಸಿಕ್ಕಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವು ಸಿಕ್ಕಿದ್ದು, ಸಿಕ್ಕಿರುವ ಹಣ ನಕಲಿನಾ ಎಂಬ ಪ್ರಶ್ನೆ ಮೂಡಿದೆ.
ನಾಗವಾರ ರೈಲು ಹಳಿ ಪಕ್ಕದ ಪೊದೆಯಲ್ಲಿ ಡಾಲರ್ ಮೌಲ್ಯದ ಕರೆನ್ಸಿಯ ಕಟ್ಟು ಇದ್ದ ಪ್ಲಾಸ್ಟಿಕ್ ಚೀಲವನ್ನು ಚಿಂದಿ ಆಯುವ ವ್ಯಕ್ತಿಗೆ ಸಿಕ್ಕಿದೆ. ಈತ ಈ ಬಗ್ಗೆ ತನ್ನ ಮಾಲೀಕನಿಗೆ ಮಾಹಿತಿ ನೀಡಿದ್ದಾನೆ. ಈ ನಡುವೆ ವಿಚಾರ ತಿಳಿದ ಮತ್ತೋರ್ವ ವ್ಯಕ್ತಿಯಿಂದ ಕಮಿಷನರ್‌ಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ನಂತರ ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಅವರು ಮಾಹಿತಿ ನೀಡಿದ ಬೆನ್ನಲ್ಲೆ ಈ ಕರೆನ್ಸಿಯ ಅಸಲಿ ಕಹಾನಿಯ ಬಗ್ಗೆ ತಿಳಿಯಲು ಹೆಬ್ಬಾಳ ಪೊಲೀಸರು ದೆಹಲಿಗೆ ತೆರಳಿದ್ದಾರೆ.
ಚಿಂದಿ ಆಯುವ ವ್ಯಕ್ತಿಗೆ ದೊರೆತ ಅಮೆರಿಕನ್ ಡಾಲರ್ ನಕಲಿನಾ ಎಂಬ ಪ್ರಶ್ನೆ ಮೂಡಿದೆ. ಅನಾಮಿಕರು ಜೆರಾಕ್ಸ್‌ಗಳನ್ನು ಬಿಸಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಹೆಬ್ಬಾಳ ಪೊಲೀಸರು ಆರ್‌ಬಿಐಗೆ ಪತ್ರ ಬರೆದಿದ್ದಾರೆ. ಯುಎಸ್ ಕರೆನ್ಸಿ ಅಸಲಿ ಎಂದು ಆರ್ಬಿಐ ಧೃಡಿಕರಿಸಿಲ್ಲ. ದೆಹಲಿಯ ಕಚೇರಿಯೊಂದರ ಬಗ್ಗೆ ಮಾಹಿತಿ ನೀಡಿದ್ದು, ಸದ್ಯ ಹೆಬ್ಬಾಳ ಪೊಲೀಸರು ದೆಹಲಿಗೆ ತೆರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎಷ್ಟು ಮಳೆಗಾಲ ಬಂದು ಹೋದರು, ಸಿದ್ಧವಾಗದ ಬಿಬಿಎಂಪಿ: ತೆರಿಗೆ ಕಟ್ಟಿಯೂ ಜನರಿಗೆ ತಪ್ಪದ ಸಮಸ್ಯೆ
ಪೊಲೀಸರು ದೊರೆತ ಅಷ್ಟು ಕರೆನ್ಸಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಡಾಲರ್ಗಳ ಜೊತೆ ವಿಶ್ವ ಸಂಸ್ಥೆಯ ಲೆಟರ್ ಹೆಡ್ನಲ್ಲಿರುವ ಪತ್ರ ಕೂಡ ಪತ್ತೆ ಆಗಿದೆ.
ಯುಎನ್ನಿಂದ ಅಭಿವೃದ್ಧಿಗಾಗಿ ಹಣ ಕಳುಹಿಸಲಾಗಿದೆ. ಈ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಲೆಟರ್ನಲ್ಲಿ ಉಲ್ಲೇಖಿಸಲಾಗಿದೆ.