ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ದಿ ಗ್ರೀನ್ ಪಾತ್ ಆರ್ಗ್ಯಾನಿಕ್ ರೆಸ್ಟೋರೆಂಟ್ ಸಹಯೋಗದಲ್ಲಿ ಸಂವಾದ- ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆಯು ಇದೇ ಶುಕ್ರವಾರದಿಂದ ಮೂರು ದಿನಗಳ ‘ಯುವಸಂತೆ’ಯನ್ನು ಆಯೋಜಿಸಿದೆ.
ಸಂವಾದ-ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆಯು ಸುಸ್ಥಿರ ಕೃಷಿ, ಪರಿಸರಕ್ಕೆ ಪೂರಕವಾದ ಅಭಿವೃದ್ಧಿ, ಯುವಜನರ ಘನತೆಯುಕ್ತ ವೃತ್ತಿ ಮತ್ತು ಸಾಮಾಜಿಕ ಬದಲಾವಣೆಯಂತಹ ವಿಷಯಗಳಲ್ಲಿ ಯುವಜನರೊಟ್ಟಿಗೆ ಕಾರ್ಯನಿರ್ವಹಿಸುತ್ತಿದೆ. ಯುವಜನರಲ್ಲಿ ಸುಸ್ಥಿರ ಅಭಿವೃದ್ದಿಗೆ ಪೂರಕವಾದ ಉದ್ಯಮಗಳು, ಸುಸ್ಥಿರ ಜೀವನೋಪಾಯಗಳು ಮತ್ತು ವೃತ್ತಿಗಳನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ಆಗಸ್ಟ್ 8ರಿಂದ 10ರವರೆಗೆ ‘ಯುವ ಸಂತೆ – ವಿಶಮುಕ್ತ ಆಹಾರದಿಂದ ಸ್ವಾತಂತ್ರ್ಯ’ ಎನ್ನುವ ವಿಷಯದಡಿ ಪರಿಸರಕ್ಕೆ ಪೂರಕವಾದ ಮತ್ತು ವಿಷಮುಕ್ತ ಆಹಾರೋತ್ಪಾದನೆ ಹಾಗೂ ಉದ್ಯಮದಲ್ಲಿ ತೊಡಗಿರುವ, ಸಂವಾದ ಬದುಕು ಸಂಸ್ಥೆಯಲ್ಲಿ ತರಬೇತಿ ಪಡೆದ ಯುವಜನರು ‘ಗ್ರೀನ್ ಪಾತ್ ಆರ್ಗಾನಿಕ್ ರೆಸ್ಟೋರೆಂಟ್’ನಲ್ಲಿ ಮಳಿಗೆಗಳನ್ನು ತೆರೆಯಲಿದ್ದಾರೆ.
ಇದು ಪರಿಸರಕ್ಕೆ ಪೂರಕವಾದ ಉದ್ಯಮದಲ್ಲಿ ತೊಡಗಿರುವ ಯುವಜನರ ಪ್ರಯತ್ನವಾಗಿರುತ್ತದೆ. ಈ ಮಳಿಗೆಗಳಲ್ಲಿ ಪರಿಸರ ಸ್ನೇಹಿ ಜೀವನಶೈಲಿಯ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ವಿಶಮುಕ್ತ ಆಹಾರ ಪದಾರ್ಥಗಳು, ಗೃಹೋತ್ಪನ್ನ ಮನೆ ಬಳಕೆಯ ವಸ್ತುಗಳು ಮಾರಾಟವಾಗಲಿವೆ.
ಆಗಸ್ಟ್ 8ರ ಶುಕ್ರವಾರ ಸಂಜೆ 4 ಗಂಟೆಗೆ ‘ಯುವ ಸಂತೆ’ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಾಹಿತಿಗಳಾದ ಎಸ್ ಜಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಭುವನೇಶ್ವರಿ(ಮುಖ್ಯಸ್ಥರು, ಒಡಲದನಿ ಮಹಿಳಾ ಒಕ್ಕೂಟ), ಜನಪ್ರಿಯ ಗಾಯಕ ವಾಸು ದೀಕ್ಷಿತ್, ಗ್ರೀನ್ ಪಾತ್ ಸಂಸ್ಥಾಪಕ ಎಚ್ ಆರ್ ಜಯರಾಮ್ ಮತ್ತು ಸಂವಾದ ಸಹ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಸವಿತಾ ಸುರೇಶ್ ಬಾಬು ಪಾಲ್ಗೊಳ್ಳಲಿದ್ದಾರೆ. ಬೇರು ಬೆವರು ಕಲಾ ಬಳಗದಿಂದ ‘ಹಸಿರು ಪದ’ ಮತ್ತು ಮೇಘನಾ ಅವರಿಂದ ‘ಅರಿವಿನ ಹಾಡುಗಳು’ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕಸದ ತಿಪ್ಪೆಯಲ್ಲಿ ಬಿದ್ದಿರುವ ಶಿಲಾಶಾಸನ; ಸಂರಕ್ಷಣೆ ಮಾಡುವಂತೆ ಗ್ರಾಮಸ್ಥರ ಮನವಿ
ಹಸಿರು ಚಿತ್ರಕಲಾ ಸ್ಪರ್ಧೆ
ಆಗಸ್ಟ್ 9ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ‘ಹಸಿರು ಚಿತ್ರಕಲಾ ಸ್ಪರ್ಧೆ’ ಆಯೋಜಿಸಲಾಗಿದೆ. ‘ನಾವು ಮತ್ತು ಪರಿಸರ’, ‘ಸುಸ್ಥಿರ ಪರಿಸರ-ನಮ್ಮ ಜವಾಬ್ದಾರಿ’ ಎಂಬ ವಿಷಯಗಳಲ್ಲಿ ಸ್ಪರ್ಧೆ ಇರಲಿದೆ. ಇದರಲ್ಲಿ ಎರಡು ವಿಭಾಗಗಳಿದ್ದು, 5 ರಿಂದ 14 ವರ್ಷದ ಮಕ್ಕಳಿಗೆ ಒಂದು ವಿಭಾಗ ಮತ್ತು 15 ರಿಂದ 22 ವರ್ಷದ ಯುವಜನರಿಗೆ ಮತ್ತೊಂದು ವಿಭಾಗವಿದೆ. ಚಿತ್ರಕಲೆಗೆ ಬೇಕಾದ ಸಾಮಗ್ರಿಗಳನ್ನು ಸ್ಪರ್ಧಾರ್ಥಿಗಳೇ ತರಬೇಕು. ಸಾಧ್ಯವಾದಷ್ಟೂ ಪರಿಸರಸ್ನೇಹಿ ಬಣ್ಣಗಳನ್ನೇ ತರಲು ಮನವಿ ಮಾಡಲಾಗಿದೆ. ವಿಜೇತರಿಗೆ ಆಗಸ್ಟ್ 10ರ ಭಾನುವಾರದಂದು ಬಹುಮಾನ ವಿತರಣೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ : 73378 35677 ಕ್ಕೆ ಸಂಪರ್ಕಿಸಬಹುದು.