ಆನ್‌ಲೈನ್ ಉದ್ಯೋಗದ ಟಾಸ್ಕ್ ಹೆಸರಿನಲ್ಲಿ 6 ಕೋಟಿ ರೂಗಳು ವಂಚನೆ ನಡೆಸಿದ್ದ ಬೃಹತ್ ಜಾಲವನ್ನು ಭೇದಿಸಿರುವ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಮ್(ಸೆನ್) ಪೊಲೀಸರು, 10 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ, ಜಾಲದಲ್ಲಿದ್ದ ಬಂಧಿತ ಆರೋಪಿಗಳು ಬಳಸಿದ್ದ 72 ಮೊಬೈಲ್ ಫೋನ್‌ಗಳು, ಬ್ಯಾಂಕ್ ಖಾತೆಯಲ್ಲಿದ್ದ ₹7,34,768 ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ₹1.74 ಲಕ್ಷ ನಗದು, 182 ಡೆಬಿಟ್ ಕಾರ್ಡ್, 2 ಲ್ಯಾಪ್ ಟಾಪ್, ವಿವಿಧ ಕಂಪನಿಗಳ ಸಿಮ್, 127 ಬ್ಯಾಂಕ್ ಪಾಸ್ ಬುಕ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸೈಯದ್ ಯಹ್ಯಾ ,ಉಮರ್ ಫಾರೂಕ್, ಮೊಹಮ್ಮದ್ ಮಾಹಿನ್, ಮೊಹಮ್ಮದ್ ಮುಝಮ್ಮಿಲ್, ತೇಜೇಶ್, ಚೇತನ್, ವಸೀಂ, ಸೈಯದ್ ಝಾಯೀದ್, ಅಬ್ದುಲ್ ಅನಾನ್ ಹಾಗೂ ಓಂ ಪ್ರಕಾಶ್ ವಂಚನಾ ಜಾಲದ ಬಂಧಿತ ಆರೋಪಿಗಳಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.

ಬಾಗಲಗುಂಟೆ ಟಿ.ದಾಸರಹಳ್ಳಿಯ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಕಳೆದ ಜೂನ್ 7ರಂದು ಜಾಲದಲ್ಲಿದ್ದ ಆರೋಪಿಯು ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ ಆನ್‌ಲೈನ್ ಉದ್ಯೋಗ ನೀಡುವುದಾಗಿ ತಿಳಿಸಿದ್ದಾನೆ. ಬಳಿಕ ವಾಟ್ಸಾಪ್‌ನಲ್ಲಿ ಕೆಲವು ಲಿಂಕ್‌ಗಳನ್ನು ಅಪರಿಚಿತ ವ್ಯಕ್ತಿಯು ಕಳುಹಿಸಿ ಟೆಲಿಗ್ರಾಂ ಗ್ರೂಪ್‌ಗೆ ಸೇರ್ಪಡಿಸಿದ ನಂತರ ಟಾಸ್ಕ್‌ಗಳನ್ನು ನೀಡಿದ್ದು, ಈ ಟಾಸ್ಕಿನಲ್ಲಿ ಐಷಾರಾಮಿ ಹೋಟೆಲ್‌ಗಳ ರೀವಿವ್ಯೂವನ್ನು ಮಾಡುವಂತೆ ತಿಳಿಸಿದ್ದಾನೆ. ಈ ರಿವ್ಯೂ ಮಾಡಿದರೆ ಹಣ ಸಿಗುವುದಾಗಿ ಪುಸಲಾಯಿಸಿ, ಬಳಿಕ ಅಕೌಂಟ್‌ಗೆ 400ರಿಂದ 500ರೂ ಸಂದಾಯ ಮಾಡುತ್ತಿದ್ದ. ಇದೇ ರೀತಿ ಹಲವಾರು ರಿವ್ಯೂ ರಿಪೋರ್ಟ್‌ಗಳನ್ನು ತರಿಸಿಕೊಂಡು ಹೆಚ್ಚಿನ ಹಣವನ್ನು ಸಂದಾಯ ಮಾಡಿ ನಂಬಿಕೆ ಹುಟ್ಟಿಸಲಾಗಿತ್ತು.
ಇದಲ್ಲದೇ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೂಡಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭ ಬರುವುದಾಗಿ ನಂಬಿಸಿ, ಜೂನ್ 6ರಿಂದ ಜುಲೈ1ರ ವರೆಗೆ 25,37,815 ರೂ ಹಣವನ್ನು ವರ್ಗಾಯಿಸಿಕೊಂಡು ವಂಚನೆ ನಡೆಸಿದರು. ಬಳಿಕ ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಉತ್ತರ ವಿಭಾಗದ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ತನಿಖೆಯನ್ನು ಕೈಗೊಂಡ ಸೈಬರ್ ಕ್ರೈಂ ಪೊಲೀಸರು, ವಿವಿಧ ಬ್ಯಾಂಕ್‌ಗಳ ಅಕೌಂಟ್‌ಗಳಿಗೆ ಹಣವು ವರ್ಗಾವಣೆಯಾಗಿರುವ ಖಾತೆಗಳ ಖಾತೆದಾರರ ವಿವರಗಳನ್ನು ಸಂಪೂರ್ಣವಾಗಿ ಪಡೆದುಕೊಂಡು, ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ 10 ಮಂದಿಯ ಪೈಕಿ 7 ಮಂದಿಯನ್ನು ಕಳೆದ ಸೆ. 13ರಂದು ಆರ್.ಟಿ. ನಗರದ 13ನೇ ಕ್ರಾಸ್‌ನ ಕಾಫಿಡೇ ಮುಂಭಾಗ ಬಂಧಿಸಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ಮೂರು ಬ್ಯಾಗ್‌ಗಳನ್ನು ಕೂಡ ಜಪ್ತಿ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಫೋನ್ ಪೇ, ಗೂಗಲ್ ಪೇ ಬಳಕೆಗೂ ಜಿಎಸ್‌ಟಿ ಬಿದ್ದರೆ ಮುಂದೇನು?
ಬಂಧಿತರನ್ನು ಠಾಣೆಗೆ ಕರೆತಂದು ಬ್ಯಾಗ್‌ಗಳನ್ನು ಪರಿಶೀಲಿಸಿದಾಗ, 99 ಡಿಬಿಟ್ ಕಾರ್ಡ್‌ಗಳು, 50 ಬ್ಯಾಂಕ್ ಪಾಸ್ ಪುಸ್ತಕಗಳು, 41 ಸಿಮ್ ಕಾರ್ಡ್‌ಗಳು, 1 ಲ್ಯಾಪ್‌ಟಾಪ್, 23 ಮೊಬೈಲ್ ಗಳು ಹಾಗೂ 1.24 ಲಕ್ಷ ಪತ್ತೆಯಾಗಿದ್ದು, ಎಲ್ಲವನ್ನೂ ವಶಪಡಿಸಿಕೊಳ್ಳಲಾಯಿತು ಎಂದು ಕಮಿಷನರ್ ದಯಾನಂದ್ ತಿಳಿಸಿದರು.
ಬಂಧಿತರ ವಿಚಾರಣೆಯ ವೇಳೆ ತಾವು ಮಾಡುತ್ತಿದ್ದ ವಂಚನೆಯ ಜಾಲವನ್ನು ಬಾಯ್ಬಿಟ್ಟಿದ್ದು, ತಲೆಮರೆಸಿಕೊಂಡಿದ್ದ ಇತರ ಮೂವರ ಬಗ್ಗೆ ನೀಡಿದ ಮಾಹಿತಿಯನ್ನು ಆಧರಿಸಿ ಅವರನ್ನೂ ಕೂಡ ಬಂಧಿಸಲಾಗಿದೆ. ಬಂಧಿತರಲ್ಲಿ ಮೂವರು ಚೀನಾಕ್ಕೆ ಹೋಗಿದ್ದು, ಅಲ್ಲಿನ ಸೈಬರ್ ವಂಚಕರನ್ನು ಭೇಟಿ ಮಾಡಿರುವುದು ಪತ್ತೆಯಾಗಿದೆ. ಅಲ್ಲಿಂದ ವಾಪಾಸು ಬರುವ ವೇಳೆಯೇ ಅವರು ಸಿಕ್ಕಿಬಿದ್ದಿದ್ದಾರೆ ಎಂದು ಕಮಿಷನರ್ ವಿವರಿಸಿದ್ದಾರೆ.
ಚೀನಾದಿಂದ ಬಂದ ಆರೋಪಿಗಳಿಂದ 6 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲ 10 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಕಮಿಷನರ್ ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಂಧಿತ 10 ಆರೋಪಿಗಳ ಪೈಕಿ ಇಬ್ಬರು ನೆಲಗದರನಹಳ್ಳಿ, ಪೀಣ್ಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕಚೇರಿಯನ್ನು ಹೊಂದಿದ್ದು, ಈ ಕಚೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ್ದ 47 ಬ್ಯಾಂಕ್ ಪಾಸ್‌ಬುಕ್‌ಗಳು, 48 ಸಿಮ್ ಕಾರ್ಡ್‌ಗಳು, 31 ಡೆಬಿಟ್ ಕಾರ್ಡ್‌ಗಳು, 9 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರ ಪೈಕಿ ಮೂವರು ಆರೋಪಿಗಳು ಸಂಪಿಗೆಹಳ್ಳಿ ಪಿಜಿಯಲ್ಲಿ ವಾಸವಾಗಿದ್ದು, ಆ ಆರೋಪಿಗಳು ಪಿ.ಜಿಯಲ್ಲಿಟ್ಟಿದ್ದ 52 ಡೆಬಿಟ್ ಕಾರ್ಡ್‌ಗಳು, 34 ಮೊಬೈಲ್ ಫೋನ್‌ಗಳು, 40 ಸಿಮ್‌ಕಾರ್ಡ್‌ಗಳು, 1 ಲ್ಯಾಪ್‌ಟಾಪ್ ಹಾಗೂ 30 ಬ್ಯಾಂಕ್ ಪಾಸ್ ಬುಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಇತರೆ ಆರೋಪಿಗಳ ಮನೆಗಳನ್ನು ಶೋಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಯಾವುದೇ ಉಪಯುಕ್ತ ಮಾಹಿತಿ/ವಸ್ತುಗಳು ದೊರೆತಿರುವುದಿಲ್ಲ. ಬಂಧಿತ 10 ಆರೋಪಿಗಳಲ್ಲಿ ಐವರು ವಿವಿಧ ಎಟಿಎಂನಿಂದ ವಂಚಿಸಿದ್ದ ಹಣವನ್ನು ಪಡೆದಿದ್ದ ಎಟಿಎಂ ಕೇಂದ್ರಗಳಲ್ಲಿ ತನಿಖೆ ಕೈಗೊಳ್ಳಲಾಗಿರುತ್ತದೆ. ತನಿಖೆ ಮುಂದುವರೆಸಿ ವಶಪಡಿಸಿಕೊಂಡಿದ್ದ 127 ವಿವಿಧ ಬ್ಯಾಂಕ್ ಪಾಸ್ ಪುಸ್ತಕಗಳ ಆಧಾರದ ಮೇಲೆ, ಒಟ್ಟು ₹7,34,768 ರೂ ಗಳನ್ನು ಫ್ರೀಝ್ ಮಾಡಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಈ ಪ್ರಕರಣದ ಎಲ್ಲ ಆರೋಪಿಗಳು ಬೆಂಗಳೂರಿನವರಾಗಿದ್ದು, ಈ ಪ್ರಕರಣದಂತೆಯೇ, ಭಾರತದಾದ್ಯಂತ ವಿವಿಧ 21 ರಾಜ್ಯಗಳಲ್ಲಿ ಒಟ್ಟು 122 ಎನ್.ಸಿ.ಆರ್.ಪಿ ಪ್ರಕರಣಗಳು ದಾಖಲಾಗಿರುತ್ತವೆ. ಆಂಧ್ರ ಪ್ರದೇಶದಲ್ಲಿ 10, ಅಸ್ಸಾಂನಲ್ಲಿ 1, ಬಿಹಾರ 6, ಚಂಡೀಘಡದಲ್ಲಿ 1, ಛತ್ತೀಸ್‌ಘಡದಲ್ಲಿ 3, ದೆಹಲಿಯಲ್ಲಿ 3, ಗುಜರಾತ್‌ನಲ್ಲಿ 7, ಹರಿಯಾಣದಲ್ಲಿ 1, ಹಿಮಾಚಲ ಪ್ರದೇಶದಲ್ಲಿ 1, ಕರ್ನಾಟಕದಲ್ಲಿ 9, ಕೇರಳದಲ್ಲಿ 2, ಮಧ್ಯಪ್ರದೇಶದಲ್ಲಿ 1, ಮಹಾರಾಷ್ಟ್ರದಲ್ಲಿ 12, ಒಡಿಶಾದಲ್ಲಿ 2, ಪಂಜಾಬ್‌ನಲ್ಲಿ 4, ರಾಜಸ್ತಾನದಲ್ಲಿ 5, ತಮಿಳನಾಡಿನಲ್ಲಿ 20, ತೆಲಂಗಾಣದಲ್ಲಿ 12, ಉತ್ತರ ಪ್ರದೇಶದಲ್ಲಿ 16, ಉತ್ತರಾಖಂಡದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 3, ಮತ್ತು ಬೆಂಗಳೂರು ನಗರ ಉತ್ತರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಕಮಿಷನರ್ ದಯಾನಂದ್ ಸಂಪೂರ್ಣ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್: ಮಹಿಳೆ ವಿರುದ್ಧ ಎಸ್‌ಡಿಪಿಐ ಮುಖಂಡನಿಂದ ದೂರು
ಈ ಪ್ರಕರಣವನ್ನು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್, ಎಸಿಪಿ ಪವನ್, ಇನ್ಸ್‌ಪೆಕ್ಟರ್ ಶಿವರತ್ನ ನೇತೃತ್ವದ ಸಿಬ್ಬಂದಿ ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ್ದಕ್ಕೆ ಸೈಬರ್ ಕ್ರೈಮ್ ಪೊಲೀಸರಿಗೆ 25 ಸಾವಿರ ರೂ.ಗಳ ಬಹುಮಾನವನ್ನು ನೀಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
