ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕೆರೆ ಅಥವಾ ಉದ್ಯಾನವನದ ನಿರ್ವಹಣೆಯ ಮೇಲ್ವಿಚಾರಣೆಗೆ ಸ್ವಯಂ ಸೇವಕರಾಗಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಾಗರಿಕರಿಗೆ ಅವಕಾಶ ಕಲ್ಪಿಸಿದೆ.
ಪಾಲಿಕೆಯು ತನ್ನ ವೆಬ್‌ಸೈಟ್‌ನಲ್ಲಿ ‘ಕೆರೆ’ ಮತ್ತು ‘ಹಸಿರು ಮಿತ್ರ’ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ನಾಗರಿಕರನ್ನು ಆಹ್ವಾನಿಸಿದೆ. ಅಕ್ಟೋಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಸೀಮಿತ ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬಿಬಿಎಂಪಿ ಪ್ರಾರಂಭಿಸಿರುವ ಈ ಹೊಸ ಕಾರ್ಯಕ್ರಮಕ್ಕೆ ನಾಗರಿಕರು ನೋಂದಾಯಿಸಿಕೊಳ್ಳುವ ಮೂಲಕ ಈ ಕಾರ್ಯದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದೆ.
ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಈ ತಿಂಗಳ ಆರಂಭದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನದ ಅಡಿಯಲ್ಲಿ ಹೊಸ ಕಾರ್ಯಕ್ರಮವನ್ನು ಘೋಷಿಸಿದರು. ಅಧಿಕಾರಗಳಿಗೆ ನೇರ ಪ್ರವೇಶ ಹೊಂದಿರುವ ಪಕ್ಷದ ಕಾರ್ಯಕರ್ತರನ್ನು ಹೊರತುಪಡಿಸಿ, ಕಾರ್ಯಕ್ರಮವು ಸಾಮಾನ್ಯ ನಾಗರಿಕರಿಗೆ ಮಾತ್ರ ಎಂದು ಹೇಳಿದ್ದರು.
ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಒದಗಿಸಲಾದ ನೋಂದಣಿ ನಮೂನೆಯುಲ್ಲಿ ಆಸಕ್ತ ಸ್ವಯಂಸೇವಕರು ಹೆಸರು, ಫೋನ್ ಸಂಖ್ಯೆ, ಇಮೇಲ್ ಐಡಿ, ವಸತಿ ವಿಳಾಸ, ಮತದಾರರ ಗುರುತಿನ ಪ್ರತಿ, ವಾರ್ಡ್‌ನ ಹೆಸರು ಮತ್ತು ಆದ್ಯತೆಯ ಕೆರೆ ಅಥವಾ ಉದ್ಯಾನದಂತಹ ವಿವರಗಳನ್ನು ನೀಡಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಡಿಯಲ್ಲಿ ಬರುವುದರಿಂದ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳು ಪಟ್ಟಿಯಲ್ಲಿಲ್ಲ.
ಬಿಬಿಎಂಪಿಯ ಉದ್ಯಾನಗಳು ಮತ್ತು ಕೆರೆಗಳ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ, “ಕಾರ್ಯಕ್ರಮವು 1,200ಕ್ಕೂ ಹೆಚ್ಚು ಉದ್ಯಾನವನಗಳು ಮತ್ತು 200 ಕೆರೆಗಳನ್ನು ಒಳಗೊಂಡಿದೆ. ಇದು ಸಂಪೂರ್ಣವಾಗಿ ಸ್ವಯಂಸೇವಕ ಸೇವೆಯಾಗಿದೆ”ಎಂದು ಹೇಳಿದರು.
ನಾಗರಿಕರು ಕೆರೆಗಳು ಮತ್ತು ಉದ್ಯಾನವನಗಳಲ್ಲಿನ ನಿರ್ವಹಣಾ ಚಟುವಟಿಕೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬಹುದು. ಇದರಿಂದಾಗಿ ಪಾಲಿಕೆಯು ಉತ್ತಮ ಸೇವೆಗಳನ್ನು ಒದಗಿಸಲು ಮತ್ತು ನಾಗರಿಕರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೆರೆ ಮತ್ತು ಉದ್ಯಾನವನ ನಿರ್ವಹಣೆಗೆ ಪಾಲಿಕೆಯು ಉದಾರವಾಗಿ ಖರ್ಚು ಮಾಡುತ್ತದೆ. ಆದರೆ, ಎಂಜಿನಿಯರ್‌ಗಳನ್ನು ಹೊರತುಪಡಿಸಿ ಎರಡನೇ ಹಂತದ ಪರಿಶೀಲನೆ ನಡೆದಿಲ್ಲ.
ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಎಲ್ಲ ಕೆರೆಗಳು ಮತ್ತು ಉದ್ಯಾನವನಗಳನ್ನು ಪ್ರದರ್ಶಿಸಿಲ್ಲ. ಡ್ರಾಪ್-ಡೌನ್ ಮೆನುವಿನಲ್ಲಿ ಕೆಲವು ವಾರ್ಡ್‌ಗಳ ಹೆಸರು ಇಲ್ಲ ಎಂದು ಎಂದು ಕೆಲವರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಸಿಬಿ ಪೊಲೀಸರು ಸೋಗೆಯಲ್ಲಿ ವ್ಯಕ್ತಿಯ ಅಪಹರಣ; ಹಣಕ್ಕೆ ಬೇಡಿಕೆ ಇಟ್ಟ ಆರೋಪಿಗಳು
ಸಾರಕ್ಕಿ ಕೆರೆ ಸುಧಾರಣಾ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಕೆ.ಎಸ್.ಭಟ್ ಮಾತನಾಡಿ, “ಇದೇ ರೀತಿಯ ಕೆರೆ ವಾರ್ಡನ್ ಎಂಬ ಪರಿಕಲ್ಪನೆಯು ಐದು ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು. ಆದರೆ, ಬಿಬಿಎಂಪಿ ಅವರ ಅವಲೋಕನಗಳನ್ನು ಗಣನೆಗೆ ತೆಗೆದುಕೊಂಡಿಲ್ಲ” ಎಂದು ದೂರಿದರು.