ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಸಾಲು ಸಾಲು ಬೆಂಕಿ ಅವಘಡಗಳು ಸಂಭವಿಸಿದ್ದು, ಇದೀಗ ನಗರದ ಕೋರಮಂಗಲದಲ್ಲಿರುವ ಪಬ್‌ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಕೋರಮಂಗಲದ ತಾವರೆಕರೆ ಮುಖ್ಯರಸ್ತೆಯಲ್ಲಿರುವ ಫೋರಂ ಮಾಲ್ ಎದುರಿಗಿರುವ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿರುವ ಪಬ್‌ಗೆ ಬೆಂಕಿ ಹೊತ್ತಿದೆ. ಅಲ್ಲದೇ, ಪಬ್‌ನ ಪಕ್ಕದ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ನಾಲ್ಕರಿಂದ ಐದು ವಾಹನಗಳು ಸುಟ್ಟು ಕರಕಲಾಗಿವೆ.
ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿರುವ ಪಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದ ಕೆಳ ಮಹಡಿಯಲ್ಲಿರುವ ನೆಕ್ಸಾ ಕಾರ್ ಷೋ ರೂಂನಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಎರಡು ಮತ್ತು ಮೂರನೇ ಫ್ಲೋರ್ನಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಬೆಂಕಿ ವ್ಯಾಪಕವಾಗಿ ಹಬ್ಬಿದ ಹಿನ್ನೆಲೆ, ವ್ಯಕ್ತಿಯೋರ್ವ ಜೀವ ಉಳಿಸಿಕ್ಕೊಳ್ಳಲು ನಾಲ್ಕನೇ ಮಹಡಿಯಿಂದ ಹಾರಿ ಬಿದ್ದಿದ್ದಾರೆ. ಸದ್ಯ ವ್ಯಕ್ತಿಯನ್ನು ಆಟೋ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ಅಗ್ನಿ ದುರಂತ | ಮತ್ತೋರ್ವ ಗಾಯಾಳು ಸಾವು; ಮೃತರ ಸಂಖ್ಯೆ 17ಕ್ಕೆ ಏರಿಕೆ
“ಬೆಳಗ್ಗೆ ಸುಮಾರು 11 ಗಂಟೆಗೆ ಪಬ್‌ನಲ್ಲಿ ಸ್ಪಾರ್ಕ್ ಕಾಣಿಸಿತು. ಆಗಲೇ ಎಚ್ಚೆತ್ತು ಎಲ್ಲ ಸಿಬ್ಬಂದಿಗಳನ್ನು ಹೊರಗೆ ಕರೆಸಿದೆವು. ಸ್ಪಾರ್ಕ್ ಆದ ತಕ್ಷಣ ಎರಡು ಸಿಲಿಂಡರ್ ಬ್ಲಾಸ್ಟ್ ಆಗಿವೆ” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.