ಟ್ರಿಪಲ್ ವೆಸೆಲ್ ಕೊರೊನರಿ ಕಾಯಿಲೆಗೆ ತುತ್ತಾಗಿದ್ದ ಮಡಗಾಸ್ಕರ್ ದ್ವೀಪದ 64 ವರ್ಷದ ವ್ಯಕ್ತಿಗೆ ಬೆಂಗಳೂರಿನಲ್ಲಿ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಹೈಬ್ರಿಡ್ ಶಸ್ತ್ರಚಿಕಿತ್ಸೆ ನಡೆಸಿದೆ.
ಈಸ್ಟ್ ಆಫ್ರಿಕಾ ಮಡಗಾಸ್ಕರ್ ದ್ವೀಪ ದೇಶದ 64 ವರ್ಷದ ವ್ಯಕ್ತಿ ಹೃದಯದ ಟ್ರಿಪಲ್ ವೆಸೆಲ್ ಕೊರೊನರಿ(ಮೂರು ಪ್ರಮುಖ ಅಪಧಮನಿಗಳ ಬ್ಲಾಕೇಜ್) ಕಾಯಿಲೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯೋ ಥೋರಾಸಿಕ್ ವಾಸ್ಕಲರ್ ಸರ್ಜರಿ ಹಿರಿಯ ಸಮಾಲೋಚಕ ಡಾ. ಸುದರ್ಶನ್ ಜಿ ಟಿ, ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಶ್ರೀನಿವಾಸ್ ಪ್ರಸಾದ್, ಯೂರೋ ಆಂಕಾಲಜಿ ಯುರೋ-ಗೈನಕಾಲಜಿ, ಆಂಡ್ರಾಲಜಿ, ಕಸಿ ಮತ್ತು ರೋಬೋಟಿಕ್ ಸರ್ಜರಿಯ ಹಿರಿಯ ನಿರ್ದೇಶಕ ಡಾ. ಮೋಹನ್ ಕೇಶವ್‌ಮೂರ್ತಿ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.
ಡಾ. ಸುದರ್ಶನ್ ಜಿ ಟಿ ಮಾತನಾಡಿ, “ಮಡಗಾಸ್ಕರ್ ದ್ವೀಪ ದೇಶದ 64 ವರ್ಷದ ವ್ಯಕ್ತಿಯ ಆರೋಗ್ಯದ ಹಿನ್ನೆಲೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಮಧುಮೇಹ, ಮೂತ್ರಪಿಂಡ ವೈಫಲ್ಯ, ಪ್ರಾಸ್ಟೆಟ್ ಗ್ರಂಥಿಯ ಸಮಸ್ಯೆ, ಟ್ರಿಪಲ್ ವೆಸೆಲ್ ಕೊರೊನರಿ ಕಾಯಿಲೆ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ಮಧುಮೇಹದ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ತನ್ನೆರಡೂ ಕಾಲುಗಳನ್ನು ಕಳೆದುಕೊಂಡು ಅಂಗವೈಕಲ್ಯಕ್ಕೂ ತುತ್ತಾಗಿದ್ದರು. ಇದರ ಮಧ್ಯೆ ಇವರಿಗೆ ಟ್ರಿಪಲ್ ವೆಸೆಲ್ ಕೊರೊನರಿ ಕಾಯಿಲೆಯಿಂದ ಹೃದಯದ ನೋವು ಕಾಣಿಸಿಕೊಂಡಿದೆ. ಮಡಗಾಸ್ಕರ್ ದ್ವೀಪದಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗೆ ಸುಧಾರಿತ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು” ಎಂದು ತಿಳಿಸಿದ್ದಾರೆ.
“ಈಗಾಗಲೇ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಅವರಿಗೆ ತೆರೆದ ಬೈಪಾಸ್ ಸರ್ಜರಿ ಅಸಾಧ್ಯವಾಗಿತ್ತು. ಹಾಗಾಗಿ ಅವರಿಗೆ ರೋಬೋಟ್ ನೆರವಿನ “ರೋಬೋಟ್ ಅಸಿಸ್ಟೆಡ್ ಮಿನಿಮಲಿ ಇನ್ವೇಸಿವ್ ಡೈರೆಕ್ಟ್ ಕರೋನರಿ ಆರ್ಟರಿ ಬೈಪಾಸ್ (ಎಂಐಡಿಸಿಎಬಿ) ಎಂಬ ಕನಿಷ್ಠ ಆಕ್ರಮಣಕಾರಿ ವಿಧಾನದ ಹೈಬ್ರಿಡ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಇದೊಂದು ನೂತನ ಚಿಕಿತ್ಸೆಯಾಗಿದ್ದು, ಇದು ನೇರ ಪರಿಧಮನಿಯ ಬೈಪಾಸ್ ಸರ್ಜರಿ ಮಾಡುವ ಮೂಲಕ ಕಿರಿದಾದ ಅಪಧಮಿಗಳ ರಕ್ತದ ಹರಿವನ್ನು ಸುಧಾರಿಸಬಹುದು” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಆ.18ರಂದು 7ನೇ ಕನ್ನಡ ಅಕ್ಷರ ಜಾತ್ರೆ ಕಾರ್ಯಕ್ರಮ
ಡಾ. ಮೋಹನ್ ಕೇಶವಮೂರ್ತಿ ಮಾತನಾಡಿ, “ಮೂತ್ರಪಿಂಡದ ವೈಫಲ್ಯ ಹಾಗೂ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ ಹೊಂದಿದ್ದ ಅವರಿಗೆ ಯೂರೋಲಿಫ್ಟ್ ಮೂಲಕ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗೆ ಚಿಕಿತ್ಸೆ ನೀಡಿದೆವು. ಪ್ರಸ್ತುತ ರೋಗಿಯು ಚೇತರಿಕೆ ಕಾಣುತ್ತಿದ್ದಾರೆ” ಎಂದು ಹೇಳಿದ್ದಾರೆ.