ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಲು ಉತ್ಸಾಹಿಗಳಾಗಿದ್ದಾರೆ. ಇಂದಿನ ದಿನಗಳಲ್ಲಿ ಜೈಲು ಎಂಬುವುದು ಗೂಂಡಾಗಳಿಗೆ, ಕಳ್ಳರಿಗೆ, ಕೊಲೆಗಡುಕರಿಗೆ ಮನಃಪರಿವರ್ತನೆಯ ತಾಣವಾಗಿರುವ ಬದಲು ಮೋಜು ಮಸ್ತಿ ಜತೆಗೆ ರೀಲ್ಸ್ ಮಾಡುವ ತಾಣವಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಹಿಂದಿನ ದಿನಗಳಲ್ಲಿ ಪೊಲೀಸರನ್ನು ಕಂಡರೆ ಭಯ ಪಡುತ್ತಿದ್ದ ಗೂಂಡಾಗಳು ಇದೀಗ ಪೊಲೀಸರ ಎದುರಿಗೆ ಅಂದರೆ ಬಂಧನವಾದಾಗಲೂ ಅವರ ಮುಂದೆ ನಿಂತು ಸಿಗರೇಟ್ ಸೇದುವುದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು. ಇಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸಿದ್ದಾಪುರ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಎಂಬ ರೌಡಿಶೀಟರ್ ಈ ಹಿಂದೆ ಕೊಲೆ ಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದನು. ತಾಕತ್ ಇದ್ದರೆ, ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಅವಾಜ್ ಹಾಕಿ ವಿಡಿಯೋ ಮಾಡಿದ್ದನು. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ, ಕೆಲ ಪುಂಡು ಪೋಕರಿ ಹುಡುಗರಿಗೆ ಸ್ಟಾರ್ ಆಗಿದ್ದನು. ಇದೀಗ, ಮತ್ತೆ ಅಂತಹದೆ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ.
ಪೊಲೀಸರ ಎದುರಲ್ಲೆ ಕೈಗೆ ಕೋಳ ಹಾಕಿದ್ದರೂ, ನಾಲ್ಕೈದು ಸಿಗರೇಟ್ ಸೇದಿದ್ದಾನೆ. ಈ ವೇಳೆ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇದನ್ನು ಕಂಡ ಈತನ ಸಹಚರರು ‘ಹೆಂಗೆ ನಮ್ಮಣ್ಣ’ ಎಂದು ಬಿಗುತ್ತಿದ್ದಾರೆ.
ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿ ಹೊರ ಕರೆತರುವಾಗಲೂ ಸಹ ರೀಲ್ಸ್ ಮಾಡಿದ್ದಾನೆ. ಪೊಲೀಸರ ಎದುರಲ್ಲೇ ಸಿಗರೇಟ್ ಸೇದಿ ವಿಡಿಯೋ ಮಾಡಿಸಿ ‘ನಾನ್ ಕಸ್ಟಡಿಯಲ್ಲಿದ್ದರೂ ರಾಜನೇ, ಪೊಲೀಸರು ನನಗೇನು ಮಾಡಲಾರರು’ ಎಂಬ ಸಂದೇಶವನ್ನು ರವಾನಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಗಳ ಮೇಲೆ ಅತ್ಯಾಚಾರ ಎಸಗಿದ್ದ ದುರುಳ ತಂದೆಗೆ 20 ವರ್ಷ ಜೈಲು ಶಿಕ್ಷೆ
ಕುಳ್ಳು ರಿಜ್ವಾನ್ ಅತ್ಯಾಪ್ತ ಸಹಚರರಲ್ಲಿ ಒಬ್ಬನಾಗಿದ್ದ ಸ್ಟಾರ್ ರಾಹುಲ್ ಮೇಲೆ ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ 960ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.