ರಾಜಕೀಯ ವಿರೋಧಿಗಳನ್ನು ದಮನಿಸಲು ನಡೆಸುವ ಸೇಡಿನ ರಾಜಕೀಯದ ಭಾಗವಾಗಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ಖಂಡನೀಯ ಎಂದು ಎಸ್‌ಡಿಪಿಐ ಪಕ್ಷದ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯಿಂದ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದಂತಹ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಫೈಝಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಂಧನ, ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಆಂದೋಲನವನ್ನು ಹಿಮ್ಮೆಟ್ಟಿಸುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಷಡ್ಯಂತ್ರದ ಭಾಗವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಡಿ, ಎನ್‌ಐಎ ಮೂಲಕ ನಮ್ಮನ್ನು ಈ ಹೋರಾಟದಿಂದ ಒಂದಿಂಚು ಕೂಡಾ ಹಿಂದೆ ಸರಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ” ಎಂದು ಎಚ್ಚರಿಕೆ ನೀಡಿದರು.
“ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನವು, ಕೇಂದ್ರ ಬಿಜೆಪಿ ಸರ್ಕಾರವು ಭಿನ್ನಮತದ ಧ್ವನಿಯನ್ನು ನಿಗ್ರಹಿಸಲು ನಡೆಸುತ್ತಿರುವ ಸೇಡಿನ ರಾಜಕೀಯವಲ್ಲದೆ ಬೇರೇನೂ ಅಲ್ಲವೆಂದು ಪ್ರತಿಪಾದಿಸುತ್ತದೆ. ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಮತ್ತು ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವಿರೋಧಿಗಳನ್ನು ಬೆದರಿಸುವುದು ಮತ್ತು ದಬ್ಬಾಳಿಕೆ ಮಾಡುವುದು ಆಡಳಿತದ ಕಾರ್ಯಸೂಚಿಯ ಭಾಗವಾಗಿದೆ. ಕರಾಳ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ಆಂದೋಲನದ ಮುಖ್ಯವಾಹಿನಿಯಲ್ಲಿರುವ ಎಸ್‌ಡಿಪಿಐ ಬಗ್ಗೆ ಆಡಳಿತವು ಅಸಹಿಷ್ಣುತೆಯನ್ನು ಹೊಂದಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ” ಎಂದು ಹೇಳಿದರು.
“ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗಪಡಿಸಿ ಎಸ್‌ಡಿಪಿಐ ರಾಷ್ಟೀಯ ಅಧ್ಯಕ್ಷ ಎಂ ಕೆ ಫೈಝಿ ಅವರನ್ನು ಬಂಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವಿರೋಧಿ ನಡೆಯನ್ನು ಮತ್ತೆ ಮುಂದುವರೆಸಿದೆ. ‘ಭಾರತ ಈಗಲೂ ಪ್ರಜಾಸತ್ತಾತ್ಮಕ ದೇಶ ಎಂಬುದನ್ನು ಪ್ರಧಾನಿಗಳು ಹೇಗೆ ವಿದೇಶಗಳ ಮುಂದೆ ಭಾಷಣ ಬಿಗಿಯುತ್ತಿದ್ದಾರೆಂಬ ಪ್ರಶ್ನೆ ಮೂಡುತ್ತಿದೆ. ವಿರೋಧ ಪಕ್ಷದ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಅಸ್ಪಷ್ಟ ದುರ್ಬಳಕೆಯು ಸರ್ಕಾರವು ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವಕ್ಕೆ ಪರಿವರ್ತನೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳ ತಂಡ ಬಂಧಿಸಿರುವ ವಿಪಕ್ಷಗಳ ರಾಜಕಾರಣಿಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದರೂ ಅವರ ವಿರುದ್ಧ ಅಕ್ರಮ ಎಸಗಿರುವ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಆದರೂ ಅವರನ್ನು ಬಂಧನ ಮಾಡಲಾಗಿದೆ” ಎಂದು ಆರೋಪಿಸಿದರು.
2014ರಿಂದ ಬಿಜೆಪಿ ಆಡಳಿತದ ಅವಧಿಯಲ್ಲಿ ತನಿಖಾ ಸಂಸ್ಥೆಗಳು ಎಫ್ಐಆರ್ ದಾಖಲಿಸಿರೋದು, ಬಂಧನ ಮಾಡಿರುವುದು, ದಾಳಿ ಮಾಡಿರುವುದು, ವಿಚಾರಣೆಗೆ ಒಳಪಡಿಸಿರುವ ಒಟ್ಟು ರಾಜಕಾರಣಿಗಳ ಪೈಕಿ ಬಹುತೇಕರು ವಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಬಿಜೆಪಿಗೆ ಸೇರುವ ವಿಪಕ್ಷದ ನಾಯಕರ ವಿರುದ್ಧ ತನಿಖೆ ಮಾಡಲು ತನಿಖಾ ಸಂಸ್ಥೆಗಳು ಮುಂದಾಗುವುದಿಲ್ಲ. ಇನ್ನು ‘ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನಲ್ಲಿದ್ದಾಗ ಕಲ್ಲಿದ್ದಲು ಗಣಿ, ಬೃಹತ್ ಗಾತ್ರದ ಭ್ರಷ್ಟಾಚಾರ ಹಗರಣದಲ್ಲಿ ಅವರ ವಿರುದ್ಧ 2014, 2015ರಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಆದರೆ ಅವರು ಬಿಜೆಪಿಗೆ ಸೇರಿದ ನಂತರ ಈ ಪ್ರಕರಣ ಮೂಲೆಗುಂಪಾಗಿದೆ, ಮಾತ್ರವಲ್ಲ ಅವರಿಗೆ ಬಿಜೆಪಿಯು ಮುಖ್ಯಮಂತ್ರಿ ಪಟ್ಟವನ್ನೂ ನೀಡಿದೆ” ಎಂದು ಹೇಳಿದರು.
“ಮಾಜಿ ಟಿಎಂಸಿ(ತೃಣಮೂಲ ಕಾಂಗ್ರೆಸ್) ನಾಯಕರಾದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರ ವಿರುದ್ಧದ ಶಾರದ ಚಿಟ್ ಫಂಡ್ ಹಗರಣ ಆರೋಪದಲ್ಲಿ ಇಡಿ ಮತ್ತು ಸಿಬಿಐ ವಿಚಾರಣೆಗೆ ಮುಂದಾಗಿತ್ತು. ಆದರೆ ಅವರು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ ನಂತರ ಆ ಪ್ರಕರಣವೂ ಹಳ್ಳ ಹಿಡಿದಿದೆ. ಹಾಗೆಯೇ ಮಹಾರಾಷ್ಟ್ರದ ಎನ್‌ಸಿಪಿ ಪಕ್ಷದ ಅಜಿತ್ ಪವಾರ್, ಪ್ರಫುಲ್ ಪಟೇಲ್ ಅವರುಗಳ ಮೇಲಿದ್ದ ಬೃಹತ್ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಅವರುಗಳು ಮಹಾರಾಷ್ಟ್ರದ ಬಿಜೆಪಿ ಸರ್ಕಾರದಲ್ಲಿ ಭಾಗಿಯಾದ ತಕ್ಷಣ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ನೀಡಿದ ವಿಚಾರಗಳು ಬಿಜೆಪಿ ರಾಜಕೀಯ ದ್ವೇಷ ಸಾಧನೆಯ ಭಾಗವಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿರುವುದಕ್ಕೆ ಇರುವ ಸ್ಪಷ್ಟ ಉದಾಹರಣೆಗಳಾಗಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯ ಅನುದಾನ ನೀಡಿ: ಎಸ್‌ಐಒ ಆಗ್ರಹ
“ಈಗ ಇದರ ಮುಂದಿವರೆದ ಭಾಗವಾಗಿ ದೇಶದಲ್ಲಿ ವಕ್ಫ್ ಮಸೂದೆ ವಿರುದ್ಧ ಶಕ್ತವಾದ ಹೋರಾಟ ದೇಶಾದ್ಯಂತ ಎಸ್‌ಡಿಪಿಐ ನೇತೃತ್ವದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಮೋದಿ ಸರ್ಕಾರ ಪಕ್ಷದ ರಾಷ್ಟೀಯ ಅಧ್ಯಕ್ಷರನ್ನು ಇಡಿಯ ಮೂಲಕ ಅಕ್ರಮವಾಗಿ ಬಂಧಿಸಿದೆ. ಈ ಬಂಧನವು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ನಡೆಯಾಗಿದ್ದು, ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ ಮೂಲಕ ಖಂಡಿಸುತ್ತದೆ. ಕೇಂದ್ರ ಸರ್ಕಾರ ತನ್ನ ಜನವಿರೋಧಿ ನಡೆಯಿಂದ ಹಿಂದೆ ಸರಿದು ಕೂಡಲೇ ಎಂ ಕೆ ಫೈಝಿ ಅವರನ್ನು ಬಿಡುಗಡೆ ಮಾಡಬೇಕೆಂದು ತಾಕೀತು ಮಾಡುತ್ತಿದ್ದೇವೆ. ಒಂದು ವೇಳೆ ಇದೇ ರೀತಿ ಮುಂದುವರೆದರೆ ಈ ಪ್ರತಿಭಟನೆ ಇನ್ನಷ್ಟು ಶಕ್ತಗೊಳ್ಳಲಿದೆ ಎಂಬ ಸಂದೇಶವನ್ನು ಸರ್ಕಾರಕ್ಕೆ ತಲುಪಿಸುತ್ತಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮುಜಾಹಿದ್ ಪಾಷಾ ಹಾಗೂ ಅಪ್ಸರ್ ಕೊಡ್ಲಿಪೇಟೆ ಇದ್ದರು.