ಪ್ರಿಯತಮೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಾನೇ ಅಪ್ಲೋಡ್ ಮಾಡಿ, ಬಳಿಕ ಯುವತಿಯ ಜತೆಗೆ ಪೊಲೀಸ್ ಠಾಣೆಗೆ ದೂರು ನೀಡಿ ಅಮಾಯಕನಂತೆ ನಾಟಕವಾಗಿದ್ದ ವಿಕೃತ ಮನಸ್ಸಿನ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಂಜಯ್ (26) ಬಂಧಿತ ಆರೋಪಿ. ಈತ ಮೂಲತಃ ತಮಿಳುನಾಡಿನ ವೆಲ್ಲೂರುನವನು. ಆಗ್ನೇಯ ವಿಭಾಗ ಸೆನ್ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿ ಅಂಜಯ್ ಮತ್ತು ಯುವತಿ ಇಬ್ಬರು ತಮಿಳುನಾಡಿನ ಒಂದೇ ಊರಿನವರು. 10ನೇ ತರಗತಿಯವರೆಗೂ ಒಂದೇ ತರಗತಿಯಲ್ಲಿ ಕಲಿತಿದ್ದಾರೆ. ಬಳಿಕ ಇಬ್ಬರು ಸೇರಿ ಬಿ.ಪ್ಲಾನಿಂಗ್ ಎಂಬ ಕೋರ್ಸ್ ಮುಗಿಸಿ, ನಗರಕ್ಕೆ ಬಂದು ಕೆಲಸ ಮಾಡಿಕೊಂಡು ಒಟ್ಟಿಗೆ ವಾಸವಿದ್ದರು.
ಇವರು ಇಬ್ಬರು ಒಟ್ಟಿಗೆ ಇರುವ ವಿಚಾರ ಅವರ ಕುಟುಂಬಸ್ಥರಿಗೂ ತಿಳಿದಿತ್ತು. ಹಾಗಾಗಿ, ಇಬ್ಬರು ಮದುವೆ ಮಾಡಿಕೊಳ್ಳಬೇಕು ಎಂದು ಅಂದುಕೊಂಡಿದ್ದರು ಎನ್ನಲಾಗಿದೆ.
2021ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯ ಖಾಸಗಿ ಫೋಟೋ ಶೇರ್ ಆಗಿತ್ತು. ಆ ಸಮಯದಲ್ಲಿ ರಿಪೋರ್ಟ್ ಮಾಡಿ ಯುವತಿಯ ಫೋಟೋವನ್ನು ತೆಗೆಸಲಾಗಿತ್ತು. ಮತ್ತೆ 2023ರಲ್ಲಿ ಯುವತಿಯ ಖಾಸಗಿ ಫೋಟೋ ಶೇರ್ ಆಗಿತ್ತು. ಈ ಬಗ್ಗೆ ಯುವತಿ ಆರೋಪಿ ಅಂಜಯ್‌ಗೆ ತಿಳಿಸಿದ್ದಾಳೆ.
ಆರೋಪಿ ಅಂಜಯ್ ಆಗ್ನೇಯ ಪೊಲೀಸ್ ಠಾಣೆಗೆ ಬಂದು ಯುವತಿಯ ಖಾಸಗಿ ಫೋಟೋಗಳನ್ನು ಅಪ್‌ಲೋಡ್ ಮಾಡಿದವನನ್ನು ಕಂಡುಹಿಡಿದು ಫೋಟೋ ಡಿಲೀಟ್ ಮಾಡಿಸುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದನು.
ಪೊಲೀಸ್ ತನಿಖೆಯಿಂದ ಬಯಲಾದ ಸತ್ಯ
ಪೊಲೀಸರ ಮುಂದೆ ಆರೋಪಿ ಅಂಜಯ್ ಅಂಗಲಾಚಿದ್ದನು ಕಂಡು ಯುವತಿ ಪ್ರಿಯಕರನಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇದೆ ಎಂದು ಕಣ್ಣೀರು ಹಾಕಿದ್ದಳು. ಪೊಲೀಸ್ ತನಿಖೆಯ ಬಳಿಕ ಆರೋಪಿ ಅಂಜಯ್ ನಾಟಕ ಬಯಲಾಗಿದೆ.
ಎಫ್ಐಆರ್ ದಾಖಲಿಸಿ ತನಿಖೆಗೆ ಇಳಿದಿದ್ದ ಆಗ್ನೇಯ ವಿಭಾಗ ಸೆನ್ ಪೊಲೀಸರಿಗೆ ವಿಚಾರಣೆ ವೇಳೆ ಆರೋಪಿಯ ವಿಕೃತ ಕಾಮ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಂಜಯ್ ಜತೆಗೆ ಈತನ 12 ಜನ ಸ್ನೇಹಿತರು ಸೇರಿ ಟೆಲಿಗ್ರಾಮ್ನಲ್ಲಿ d3vil-official ಮತ್ತು discord ಎಂಬ ಹೆಸರಿನ ಗ್ರೂಪ್ ಮಾಡಿಕೊಂಡಿದ್ದರು. ಆ ಗ್ರೂಪ್‌ಗಳಲ್ಲಿ ಯುವತಿಯರ ಖಾಸಗಿ ಫೋಟೋಗಳನ್ನು ಫೋಸ್ಟ್ ಮಾಡಿ, ಆ ಫೋಟೋಗಳಿಗೆ ಬರುವ ಕಮೆಂಟ್‌ಗಳಿಂದ ಸುಖ ಪಡುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆ ಟೆಲಿಗ್ರಾಮ್ ಗ್ರೂಪಿನಲ್ಲಿರುವ ಎಲ್ಲರೂ ವಿಕೃತ ಮನಸ್ಸಿನ ವ್ಯಕ್ತಿಗಳು ಆ ಗ್ರೂಪ್‌ನಲ್ಲಿ ತಮ್ಮ ತಮ್ಮ ಪ್ರಿಯತಮೆ, ಸ್ನೇಹಿತೆಯರ ನಗ್ನ ಫೋಟೋಗಳನ್ನು ಹಾಕುತ್ತಿದ್ದರು. ಈ ಗ್ರೂಪ್‌ನಲ್ಲಿ ಇದ್ದವರಲ್ಲಿ ನೂರಕ್ಕೂ ಹೆಚ್ಚು ಯುವತಿಯರ ನಗ್ನ ಫೋಟೋಗಳನ್ನು ಶೇರ್ ಮಾಡಿ, ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ವಿಚಾರಣೆಗೆ ಹಾಜರಾಗುವಂತೆ ವಜ್ರದೇಹಿ ಸ್ವಾಮೀಜಿಗೆ ಸಿಸಿಬಿ ನೋಟಿಸ್
ಅಲ್ಲದೇ @thediyahouse, @denofd3vil, @houseofd3vil, @heavenbyd3vil2 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ತೆಗೆದು ಅದರಲ್ಲೂ ಕೂಡ ಯುವತಿಯರ ಖಾಸಗಿ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಆರೋಪಿ ಅಂಜಯ್ ಫೋಟೋಗಳಿಗೆ ಬರುತ್ತಿದ್ದ ಅಸಹ್ಯ ಕಮೆಂಟ್ಗಳನ್ನು ಓದಿ ಸುಖಿಸುತ್ತಿದ್ದನು. ಯಾರದ್ದೇ ಫೋಟೋ ಹಾಕಿದ್ದರೂ ಅವರು ಬೆತ್ತಲೆಯಾಗಿ ಕಾಣಿಸುವಂತಹ BOT ಅನ್ನುವ ಅಪ್ಲಿಕೇಶನ್ ಅನ್ನು ಡೆವಲಪ್ ಮಾಡ್ತಿದ್ದನು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.