- 60 ಲಕ್ಷದಿಂದ 1 ಕೋಟಿ ಮರಗಳಿವೆಯೆಂದು ಅಂದಾಜು
- ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಿಬಿಎಂಪಿ
ಇತ್ತೀಚೆಗೆ ಎರಡು-ಮೂರು ಬಾರಿ ಸುರಿದ ಮಳೆಗೆ ಬೆಂಗಳೂರು ನಲುಗಿಹೋಗಿದೆ. ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಸುಮಾರು 400 ಮರಗಳ ಕೊಂಬೆಗಳು ಮುರಿದುಬಿದ್ದಿವೆ. ಈ ಬೆನ್ನಲ್ಲೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮರಗಳ ಗಣತಿಗೆ ಮುಂದಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆ, ಉದ್ಯಾನವನ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ಖಾಸಗಿ ಜಾಗಗಳಲ್ಲಿ ಒಟ್ಟು 60 ಲಕ್ಷದಿಂದ 1 ಕೋಟಿ ಮರಗಳಿವೆ ಎಂದು ಅಂದಾಜಿಸಲಾಗಿದೆ. ನಿಖರವಾಗಿ ಎಷ್ಟು ಮರಗಳಿವೆ ಎಂದು ತಿಳಿಯಲು ಮರಗಳ ಗಣತಿ ನಡೆಸಲು ಬಿಬಿಎಂಪಿ ನಿರ್ಧರಿಸಿದೆ.
ಮರಗಳ ಗಣತಿ ಪ್ರಕ್ರಿಯೆಗಾಗಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನೆರವಿನೊಂದು ಬಿಬಿಎಂಪಿ ಅಧಿಕಾರಿಗಳು ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಅದರಲ್ಲಿ, ಮರದ ಹೆಸರು, ಎತ್ತರ, ಗಾತ್ರ, ವಯಸ್ಸು ಸೇರಿದಂತೆ ಒಟ್ಟು 20 ರಿಂದ 25 ಅಂಶಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಸೋರುತಿಹುದು ಹೊಸ ಮೆಟ್ರೋ ನಿಲ್ದಾಣದ ಮಾಳಿಗೆ
ಪ್ರತಿ ಮರಗಳಿಗೂ ನಂಬರ್ ಕೊಡಲಾಗುತ್ತದೆ. ಅಲ್ಲದೆ, ಕ್ಯೂಆರ್ ಕೋಡ್ ಅಂಟಿಸಲಾಗುತ್ತದೆ. ಈ ಕ್ಯೂಆರ್ ಕೋಡ್ ಸ್ಕಾನ್ ಮಾಡಿದರೆ, ಮರದ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.
ನಗರದಾದ್ಯಂತ ಮರಗಳ ಗಣತಿ ನಡೆಸಲು ಕನಿಷ್ಠ ಒಂದು ವರ್ಷ ಸಮಯ ಬೇಕಾಗುತ್ತದೆ. ಗಣತಿ ಪ್ರಕ್ರಿಯೆಗೆ ₹6-8 ಕೋಟಿ ಖರ್ಚಾಗಬಹುದು ಎಂದು ಬಿಬಿಎಂಪಿ ಹೇಳಿದೆ.
ಮರಗಣತಿಗಾಗಿ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದ ಅನುಮತಿ ದೊರೆತ ಬಳಿಕ ಗಣತಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.