ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದು, ಮುಂದೆ ಹೋಗುತ್ತಿದ್ದ ಬಸ್ನ ಹಿಂಭಾಗಕ್ಕೆ ತಾಕಿದ್ದರಿಂದ ಆಟೋ ಅಪ್ಪಚ್ಚಿಯಾಗಿ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.
ಕೆ ಪಿ ಅಗ್ರಹಾರದ ಅನಿಲ್ ಕುಮಾರ್(50) ಹಾಗೂ ಹನುಮಂತನಗರದ ವಿಷ್ಣು ಭಾಪಟ್(80) ಸಾವನ್ನಪ್ಪಿದವರು. ಬೆಳಿಗ್ಗೆ 11.30ರ ಸುಮಾರಿಗೆ ಹೊಸಕೆರೆಹಳ್ಳಿ ಕ್ರಾಸ್ 80 ಅಡಿರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬಿಎಂಟಿಸಿ ಬಸ್ ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಬನಶಂಕರಿ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
“ಮೃತ ಆಟೋ ಚಾಲಕ ಅನಿಲ್ ಕುಮಾರ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೆ ಪಿ ಅಗ್ರಹಾರದಲ್ಲಿ ನೆಲೆಸಿದ್ದರು. ಮತ್ತೋರ್ವ ದುರ್ದೈವಿ ವಿಷ್ಣು ಭಾಪಟ್ ಅವರು ಆಯುರ್ವೇದ ವೈದ್ಯರಾಗಿ ಹನುಮಂತನಗರದಲ್ಲಿ ವಾಸಿಸುತ್ತಿದ್ದರು. ಕೆಲಸದ ಸಲುವಾಗಿ ಬೆಳಿಗ್ಗೆ ವಿಷ್ಣು ಭಾಪಟ್ ಅವರು ಆಟೋ ಹತ್ತಿದ್ದರು” ಎಂದು ಹೇಳಿದ್ದಾರೆ.
“ಹೊಸಕೆರೆಹಳ್ಳಿ ಕ್ರಾಸ್ನ 80 ಅಡಿ ರಸ್ತೆ ಕಡೆಯಿಂದ ಸೀತಾ ಸರ್ಕಲ್ ಕಡೆಗೆ ಬರುತ್ತಿದ್ದ ಆಟೋಗೆ ಬಿಎಂಟಿಸಿ ಬಸ್ ಹಿಂಬದಿಯಿಂದ ಗುದ್ದಿದೆ. ಅಪಘಾತದ ರಭಸಕ್ಕೆ ಆಟೋದ ಮುಂದೆ ಹೋಗುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ಹಿಂಭಾಗಕ್ಕೆ ಗುದ್ದಿದ ಆಟೋ ನಜ್ಜುಗುಜ್ಜಾಗಿದೆ. ಎರಡು ಬಸ್‌ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಆಟೋದಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.