ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕನಿಗೆ ‘ಬಾಗಿಲಿನಿಂದ ದೂರ ಇರು’ ಎಂದಿದ್ದಕ್ಕೆ ಆಕ್ರೋಶಗೊಂಡ ಜಾರ್ಖಂಡ್ ಮೂಲದ ಪ್ರಯಾಣಿಕನೋರ್ವ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿದ ಘಟನೆ ಬೆಂಗಳೂರಿನ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ಮಂಗಳವಾರ ಸಂಜೆ ನಡೆದಿದೆ.
ಐಟಿಪಿಎಲ್-ಬನಶಂಕರಿ ಘಟಕ-13ಕ್ಕೆ ಸೇರಿದ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ನಿರ್ವಾಹಕ ಯೋಗೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿರುವ ಆರೋಪಿಯನ್ನು ಜಾರ್ಖಂಡ್ ಮೂಲದ ಹರ್ಷ ಸಿನ್ಹಾ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀತಾ, “ಅಕ್ಟೋಬರ್ 1ರಂದು ಸಂಜೆ 5:50ರ ಸುಮಾರಿಗೆ ಐಟಿಪಿಎಲ್ ಮತ್ತು ಬನಶಂಕರಿ ಮಾರ್ಗದಲ್ಲಿ ಬಸ್ ಸಂಖ್ಯೆ KA-57 F-0015ರಲ್ಲಿ ಈ ಘಟನೆ ನಡೆದಿದೆ. ಬಸ್‌ನಲ್ಲಿ ಚಾಲಕರಾಗಿ ಸಿದ್ದಲಿಂಗಸ್ವಾಮಿ ಹಾಗೂ ನಿರ್ವಾಹಕರಾಗಿ ಯೋಗೇಶ್ ಅವರು ಎಂದಿನಂತೆ ಕರ್ತವ್ಯದಲ್ಲಿದ್ದರು. ನಿರ್ವಾಹಕ ಯೋಗೇಶ್ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ, ಸುರಕ್ಷತೆಯ ಕಾರಣಗಳಿಗಾಗಿ ಬಸ್ಸಿನ ಮಧ್ಯದ ಬಾಗಿಲಿನಿಂದ ದೂರ ನಿಲ್ಲುವಂತೆ ಪ್ರಯಾಣಿಕರಾದ ಹರ್ಷ ಸಿನ್ಹಾ ಅವರಿಗೆ ಸೂಚಿಸಿದ್ದಾರೆ, ಆದರೆ, ಪ್ರಯಾಣಿಕ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿ ನಿರ್ವಾಹಕರ ಮೇಲೆ ದಾಳಿ ಮಾಡಿ, ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ” ಎಂದು ತಿಳಿಸಿದ್ದಾರೆ.
“ದಾಳಿಯ ನಂತರ ಆರೋಪಿ ಸಿನ್ಹಾ, ಇತರ ಪ್ರಯಾಣಿಕರಿಗೆ ಬೆದರಿಕೆ ಹಾಕಿ, ಅವರು ತಕ್ಷಣ ಬಸ್ ಅನ್ನು ಇಳಿಯುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ಸುತ್ತಿಗೆಯನ್ನು ಬಳಸಿ ಬಸ್ಸಿನ ಕಿಟಕಿಗಳನ್ನು ಹಾನಿಗೊಳಿಸಿದ್ದಾನೆ. ಎಲ್ಲ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿದ ಬಳಿಕ ಚಾಲಕ ಸಿದ್ದಲಿಂಗಸ್ವಾಮಿಯವರು, ದಾಳಿಕೋರ ಪ್ರಯಾಣಿಕನನ್ನು ಬಸ್ಸಿನೊಳಗೆ ಬಂಧಿಸಿದ್ದಾರೆ. ಪ್ರಯಾಣಿಕರ ನೆರವಿನೊಂದಿಗೆ ಪೊಲೀಸ್ ಮತ್ತು ತುರ್ತು ಸೇವೆಗಳಿಗೆ ಕರೆ ಮಾಡಿ ಕಂಡಕ್ಟರ್ ಯೋಗೇಶ್ ಅವರನ್ನು ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಿರ್ವಾಹಕ ಯೋಗೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಇಸ್ರೇಲಿ ನರಮೇಧಕ್ಕೆ ಪ್ರತೀಕಾರವಾಗಿ ಮಿಸೈಲ್ ದಾಳಿ ಮಾಡಿದ ಇರಾನ್
ಘಟನೆಯ ಮಾಹಿತಿ ಪಡೆದ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಸಾರಥಿ ಸ್ಕ್ವಾಡ್ ತಕ್ಷಣ ಆಸ್ಪತ್ರೆಗೆ ಮತ್ತು ಘಟನಾ ಸ್ಥಳಕ್ಕೆ ಆಗಮಿಸಿದ್ದು, ವೈಟ್‌ಫೀಲ್ಡ್ ಪೊಲೀಸ್ ಠಾಣೆ ಪೊಲೀಸರು ಆರೋಪಿ ಹರ್ಷ ಸಿನ್ಹಾ ಅವರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಆರೋಪಿಯ ವಿವರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
