ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆ ಸಚಿವಾಲಯವು ಪುಸ್ತಕ ಮೇಳ ಆಯೋಜಿಸಿದೆ.
ಮೇಳವು ಇಂದಿನಿಂದ (ಫೆ.27) ಶುರುವಾಗಲಿದ್ದು, ಐದು ದಿನಗಳ ವರೆಗೆ ಅಂದರೆ ಮಾ.3ರವರೆಗೆ ಇರಲಿದೆ. ಇಂದು ಸಂಜೆ 4 ಗಂಟೆಗೆ ಮೇಳಕ್ಕೆ ಚಾಲನೆ ದೊರೆಯಲಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಪುಸ್ತಕ ಪ್ರದರ್ಶನ, ಸಂವಾದ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ.
ವಿವಿಧ ಪ್ರಕಾಶನ ಸಂಸ್ಥೆಗಳ ಮಳಿಗೆಗಳ ಜತೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ವಿವಿಧ ಅಕಾಡೆಮಿಗಳ ಮಳಿಗೆಗಳೂ ಇರಲಿವೆ. ಕನ್ನಡ ಹಾಗೂ ಇತರೆ ಹಲವು ಭಾಷೆಗಳ ಪುಸ್ತಕಗಳು ರಿಯಾಯಿತಿ ದರದಲ್ಲಿ ಮಾರಾಟವಾಗಲಿವೆ. ಸಾಹಿತ್ಯ, ಕಲೆ, ಸಂಗೀತ, ರಾಜಕೀಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳ ಮುಖಂಡರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾನುವಾರದಂದು ʼಸರ್ವ ಸಮಭಾವದ ಚಿಂತನೆಗಳುʼ, ʼಮಕ್ಕಳ ಸಾಹಿತ್ಯʼ, ʼಅಂಗಾಂಗ ದಾನದ ಅರಿವುʼ, ʼಸಾಹಿತ್ಯ ಮತ್ತು ಚಲನಚಿತ್ರʼ ಹಾಗೂ ʼಓದಿನ ಸುಖʼ ವಿಷಯಗಳ ಮೇಲೆ ಸಂವಾದಗಳು ನಡೆಯಲಿವೆ. ಅದಾದ ಬಳಿಕ ಕವಿಗೋಷ್ಠಿ ಇರಲಿದೆ. ಸಂಜೆ 5 ಗಂಟೆಯಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಾಧುಕೋಕಿಲ ಹಾಗೂ ತಂಡದಿಂದ ಸಂಗೀತ ಸಂಜೆ ನಡೆಯಲಿದೆ.
ಇದನ್ನೂ ಓದಿ: ಫೆ.26ರಂದು ರಾಜಧಾನಿಯಲ್ಲಿ ಸಂಭ್ರಮದಿಂದ ನಡೆಯಲಿದೆ ಬೆಂಗಳೂರು ಬ್ಯಾರಿಗಳ ‘ಬ್ಯಾರಿ ಕೂಟ’
ಮಾ.2ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ. ಮಾ.3ರಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪುಸ್ತಕಮೇಳ ವೀಕ್ಷಿಸಲಿದ್ದಾರೆ. ವಿಧಾನಮಂಡಲದ ಉಭಯ ಸದನಗಳ ಸದಸ್ಯರು ಮೇಳದಲ್ಲಿ ಭಾಗವಹಿಸಲಿದ್ದಾರೆ.
