ಬಿಬಿಎಂಪಿ ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಘಟನೆಯಿಂದ ಮೃತಪಟ್ಟ ಬಾಲಕನನ್ನು ನಿರಂಜನ್ (10) ಎಂದು ಗುರುತಿಸಲಾಗಿದೆ. ಭಾನುವಾರ ರಜಾದಿನವಾದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ಬಿಬಿಎಂಪಿ ಮೈದಾನಕ್ಕೆ ಆಟವಾಡಲೆಂದು ಸಂಜೆ 4 ಗಂಟೆ ಸುಮಾರಿಗೆ ಬಂದಿದ್ದು, ಈ ವೇಳೆ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಆಟವಾಡಲು ಮೈದಾನಕ್ಕೆ ಬಂದಿದ್ದ ನಿರಂಜನ್, ಗೇಟ್ ಬಳಿಯೇ ನಿಂತಿದ್ದನು. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿದೆ. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಬಳ್ಳಾಪುರ | ಭೀಕರ ಅಪಘಾತ; ಮೂವರು ಸಾವು, ನಾಲ್ವರಿಗೆ ಗಾಯ
ಮೃತಪಟ್ಟಿರುವ ಬಾಲಕ ನಿರಂಜನ್ ಮಲ್ಲೇಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಮಲ್ಲೇಶ್ವರಂನ ಪೈಪ್‌ಲೈನ್ ಪ್ರದೇಶದಲ್ಲಿ ವಾಸವಾಗಿದ್ದ ಆಟೋ ಚಾಲಕ ವಿಜಯ್ ಕುಮಾರ್ ಮತ್ತು ಪ್ರಿಯಾ ದಂಪತಿಯ ಮೊದಲನೇ ಪುತ್ರ ಈತ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹುಡುಗ ಸಾವು(ಕನ್ನಡ ತಲೆಬರಹ)