ದನಗಳ ಮೈ ತೊಳೆಯಲು ಕೆರೆಗೆ ಇಳಿದಿದ್ದ ರೈತರೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಒಡೇರಹಳ್ಳಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಜಾಲಿಕಟ್ಟೆಯಲ್ಲಿ ಮಂಗಳವಾರ ದನಗಳ ಮೈ ತೊಳೆಯುವಾಗ ರೈತ ಕಾಲು ಜಾರಿ ಬಿದ್ದು, ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತ ರೈತನನ್ನು ರಾಮಪುರ ಗ್ರಾಮದ ಕುಮಾರ್ (44) ಎಂದು ಗುರುತಿಸಲಾಗಿದೆ.
ದನಗಳು ಮನೆಗೆ ಹಿಂದಿರುಗಿ ಬಂದಿವೆ. ಆದರೆ, ಕುಮಾರ್ ಅವರು ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.