ರಾಜ್ಯದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿಯವರ ನೆನಪನ್ನು ಮುಂದಿನ ಪೀಳಿಗೆಗಳಿಗಾಗಿ ಉಳಿಸಿಕೊಳ್ಳುತ್ತ, ಅವರ ಕಾಳಜಿಗಳನ್ನೂ ಹೋರಾಟಗಳನ್ನೂ ಮುಂದಕ್ಕೆ ಸಾಗಿಸುವ ಉದ್ದೇಶದಿಂದ ʼಎಚ್.ಎಸ್. ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನʼ ಎಂಬ ಸಂಸ್ಥೆ ಸ್ಥಾಪಿಸಲು ದೊರೆಸ್ವಾಮಿಯವರ ಅಭಿಮಾನಿಗಳು-ಅನುಯಾಯಿಗಳು ನಿರ್ಧರಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸೌಹಾರ್ದ-ಸಹಬಾಳ್ವೆ, ಅಂತ್ಯೋದಯ-ಸರ್ವೋದಯ, ಪರಿಸರ ಸಂರಕ್ಷಣೆ, ಸಂವಿಧಾನ-ಪ್ರಜಾಪ್ರಭುತ್ವದ ರಕ್ಷಣೆ, ಕೋಮುವಾದ-ಬಂಡವಾಳವಾದ-ಫ್ಯಾಸಿಸಂಗೆ ವಿರೋಧ ಮುಂತಾಗಿ ದೊರೆಸ್ವಾಮಿಯವರು ದಣಿವರಿಯದೆ ಹೋರಾಟ ನಡೆಸಿದ್ದಾರೆ. ಈ ವಿಚಾರಗಳನ್ನು, ಅಂತೆಯೇ ಸ್ವಾತಂತ್ರ್ಯ ಚಳವಳಿಯ ನೈಜ ಇತಿಹಾಸವನ್ನು ಶಾಲಾ-ಕಾಲೇಜುಗಳ ಮೂಲಕ ಯುವಜನತೆಗೆ ಪರಿಚಯಿಸಬೇಕೆಂದು ಕೂಡ ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾದವು.

ಬೆಂಗಳೂರಿನ ಯಾವುದಾದರೊಂದು ಪ್ರಮುಖ ರಸ್ತೆ ಅಥವಾ ಮೆಟ್ರೊ ನಿಲ್ದಾಣಕ್ಕೆ ದೊರೆಸ್ವಾಮಿಯವರ ಹೆಸರಿಡಬೇಕು, ಸ್ವಾತಂತ್ರ್ಯ ಉದ್ಯಾನದಲ್ಲಿ ಅವರ ಹೆಸರಿನಲ್ಲಿ ವಿವಿಧೋದ್ದೇಶ ಕೇಂದ್ರವನ್ನು ಸ್ಥಾಪಿಸಬೇಕು, ಬೆಂಗಳೂರು ವಿ.ವಿ. ಗಾಂಧಿ ಅಧ್ಯಯನ ಕೇಂದ್ರದಲ್ಲಿ ಅವರ ಹೆಸರಲ್ಲಿ ದತ್ತಿ ಸ್ಥಾಪಿಸಬೇಕು, ಅವರ ಬರಹ-ಭಾಷಣಗಳನ್ನು ಪುಸ್ತಕಗಳಾಗಿ ಪ್ರಕಟಿಸುವ ಕೆಲಸ ಮಾಡಬೇಕು ಎಂದು ಸಭೆ ಸರ್ಕಾರವನ್ನು ಆಗ್ರಹಿಸಿತು. ಇದಕ್ಕಾಗಿ ಗಣ್ಯರ ನಿಯೋಗವೊಂದು ಶೀಘ್ರವೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಅವರಿಗೆ ಮನವರಿಕೆ ಮಾಡಬೇಕು ಎಂದು ನಿರ್ಣಯಿಸಲಾಯಿತು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ‘ಈ ದಿನ’ ವರದಿಗೆ ಎಚ್ಚೆತ್ತ ಅಧಿಕಾರಿಗಳು: ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ ತಾತ್ಕಾಲಿಕ ಪರಿಹಾರ!
ಸಭೆಯಲ್ಲಿ ಹಿರಿಯ ಮಹಿಳಾ ಹೋರಾಟಗಾರ್ತಿಯರಾದ ಡಾ.ವಿಜಯಮ್ಮ, ಇಂದಿರಾ ಕೃಷ್ಣಪ್ಪ, ರೈತ ಚಳವಳಿಯ ವೀರಸಂಗಯ್ಯ ಮತ್ತು ಸಿದ್ದಗೌಡ ಮೋದಗಿ, ಗೊರೂರು ರಾಮಸ್ವಾಮಿಯವರ ಮಗಳು ಡಾ. ವಸಂತಿ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಲ್ಲದೆ ರಾಜ್ಯಾದ್ಯಂತ ಹಲವಾರು ಗಣ್ಯರು, ಹೋರಾಟಗಾರರು ಈ ಕಾರ್ಯದಲ್ಲಿ ತಾವುಗಳೂ ಏನಾದರೊಂದು ಜವಾಬ್ದಾರಿ ನಿರ್ವಹಿಸುವ ಇಚ್ಛೆ ವ್ಯಕ್ತಪಡಿಸಿ ಸಂದೇಶಗಳನ್ನು ಕಳಿಸಿದ್ದರು.
