ಬೆಂಗಳೂರು ನಗರದ ವಿವಿಧ ಸೀರೆ ಮಳಿಗೆಗಳಲ್ಲಿ ವ್ಯಾಪಾರಿಗಳ ಕಣ್ತಪ್ಪಿಸಿ ರೇಷ್ಮೆ ಸೀರೆ ಕಳ್ಳತನ ಮಾಡುತ್ತಿದ್ದ ಸಕ್ರಿಯ ತಂಡದ ನಾಲ್ವರು ಮಹಿಳೆಯರನ್ನು ಜೆ ಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ತಮ್ಮ ಕಚೇರಿಯಲ್ಲಿ ಇಂದು(ಮಂಗಳವಾರ) ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ, “ನಗರದ ವಿವಿಧ ಸೀರೆ ಮಳಿಗೆಗಳಲ್ಲಿ ವ್ಯಾಪಾರಿಗಳ ಕಣ್ತಪ್ಪಿಸಿ ರೇಷ್ಮೆ ಸೀರೆ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿ ನಗರ ಪೊಲೀಸರು ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 17.5 ಲಕ್ಷ ರೂಪಾಯಿ ಮೌಲ್ಯದ 38 ದುಬಾರಿ ರೇಷ್ಮೆ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಇಬ್ಬರು ಆರೋಪಿಗಳ ಹುಡುಕಾಟ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳ 25ನೇ ತಾರೀಖಿನಂದು ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೇಷ್ಮೆ ಸೀರೆಗಳ ಮಳಿಗೆಗೆ ಆರು ಜನ ಮಹಿಳೆಯರಿದ್ದ ತಂಡವು ಸೀರೆ ಖರೀದಿಸುವ ನೆಪದಲ್ಲಿ ಬಂದಿದ್ದರು. ಈ ಪೈಕಿ ಇಬ್ಬರು ಮಹಿಳೆಯರು ಮೊದಲೇ 8 ಸೀರೆಗಳನ್ನು ಕಳ್ಳತನ ಮಾಡಿ ತೆರಳಿದ್ದರು. ಉಳಿದಿದ್ದ ನಾಲ್ವರು 10 ರೇಷ್ಮೆ ಸೀರೆಗಳನ್ನು ಕದ್ದು, ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಮಳಿಗೆಯ ಸಿಬ್ಬಂದಿಗಳು ಅನುಮಾನಗೊಂಡು ಅವರನ್ನು ತಪಾಸಣೆ ನಡೆಸಿದಾಗ, ಕಳ್ಳತನ ನಡೆಸಿರುವುದು ಗೊತ್ತಾಗಿದೆ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅವರನ್ನು ಬಂಧಿಸಲಾಗಿತ್ತು ಎಂದು ಕಮಿಷನರ್ ತಿಳಿಸಿದ್ದಾರೆ.
ಬಂಧಿತ ನಾಲ್ವರು ಮಹಿಳೆಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಕೂಡ ಜೆಪಿ ನಗರದ ಮಳಿಗೆಯಿಂದ ಸುಮಾರು 10 ರೇಷ್ಮೆ ಸೀರೆ, ಜಯನಗರದ ಮಳಿಗೆಯೊಂದರಿಂದ 10 ರೇಷ್ಮೆ ಸೀರೆ ಕಳವುಗೈದಿರುವುದು ತಿಳಿದುಬಂದಿದೆ. ಪ್ರತಿಯೊಂದು ರೇಷ್ಮೆ ಸೀರೆಯು ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂ ಮೌಲ್ಯದ್ದಾಗಿದೆ. ಬಂಧಿತರಿಂದ 17.5 ಲಕ್ಷ ರೂಪಾಯಿ ಮೌಲ್ಯದ 38 ದುಬಾರಿ ರೇಷ್ಮೆ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಆಂಧ್ರಪ್ರದೇಶ ಮೂಲದವರು. ಕಳ್ಳತನ ಮಾಡುತ್ತಿದ್ದ ಸೀರೆಗಳನ್ನು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಹುಡುಕಾಟ ಮುಂದುವರಿಸಲಾಗಿದೆ. ಈ ಪ್ರಕರಣದಿಂದ ಒಟ್ಟು ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ” ಎಂದು ಪೊಲೀಸ್ ಆಯುಕ್ತರಾದ ಬಿ. ದಯಾನಂದ ತಿಳಿಸಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ವ್ಯಕ್ತಿಯ ಬಂಧನ
ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಈತ ಬಸ್‌ನಲ್ಲಿ ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದನು. ಬಂಧಿತನಿಂದ 10 ಲಕ್ಷ ಮೌಲ್ಯದ 60 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ದ್ವಿಚಕ್ರವಾಹನ ಹಾಗೂ ಚಿನ್ನದ ಸರಗಳ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 9 ಲಕ್ಷ ರೂಪಾಯಿ ಮೌಲ್ಯದ 109.8 ಗ್ರಾಂ ಚಿನ್ನಾಭರಣಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, 8 ಲಕ್ಷ ಮೌಲ್ಯದ 118 ಗ್ರಾಂ ಚಿನ್ನಾಭರಣಗಳು, 203 ಗ್ರಾಂ ಬೆಳ್ಳಿ ಸಾಮಗ್ರಿಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 4 ಪ್ರಕರಣಗಳಿಗೆ ಸೇರಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.
