ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ಪೌತಿ ಖಾತಾ ಪ್ರಕರಣಗಳು ಹೆಚ್ಚಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಮಾರ್ಚ್.15ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ರೈತ ಬಾಂಧವರು, ಅವರ ವಾರಸುದಾರರು ಸರ್ವೆ ನಂಬರ್ ಗಳ ಪೌತಿ ಖಾತೆ ಬದಲಾವಣೆ ಮಾಡಿಸಿಕೊಳ್ಳದಿರುವ ಹಿನ್ನೆಲೆ, ಜಿಲ್ಲಾಡಳಿತ ವಿಶೇಷ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಿ ಪೌತಿ ಖಾತೆ ಪ್ರಕರಣಗಳನ್ನು ವಿಲೇವಾರಿ ಮಾಡಲು ತೀರ್ಮಾನಿಸಿತ್ತು. ಆದರೆ ಪೌತಿ ಖಾತೆ ಅರ್ಜಿಗಳು ನಿರೀಕ್ಷಿತ ಮಟ್ಟದಲ್ಲಿ ಸ್ವೀಕೃತವಾಗದ ಕಾರಣ ಹಾಗೂ ಇನ್ನೂ ಹೆಚ್ಚಿನ ರೈತರು, ಫಲಾನುಭವಿಗಳುಪೌತಿ ಖಾತೆ ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶ ವಿಸ್ತರಿಸಲು ಕೋರಿರುವ ಮೇರೆಗೆ ಪಾವತಿ ವಾರಸು ಖಾತೆ ಆಂದೋಲನವನ್ನು ಮಾರ್ಚ್ 15ರವರೆಗೆ ವಿಸ್ತರಿಸಲಾಗಿದೆ.
ಖಾತೆ ಬದಲಾವಣೆಗೆ ಅರ್ಜಿಯೊಂದಿಗೆ ಅರ್ಜಿದಾರರ ಆಧಾರ್ ಕಾರ್ಡ್, ಗಣಕೀಕೃತ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಪ್ರಮಾಣ ಪತ್ರ (affidavit) ಇನ್ನಿತರೆ ದಾಖಲಾತಿಗಳು (ಅಗತ್ಯವಿದ್ದಲ್ಲಿ) ಸಲ್ಲಿಸಬೇಕು.
ರೈತರು ಮೇಲಿನ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರ್, ಗ್ರೇಡ್-2 ತಹಶೀಲ್ದಾರ್, ನಾಡಕಚೇರಿ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಅಥವಾ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ದಾಖಲಾತಿಗಳನ್ನು ಸಲ್ಲಿಸಿ ಕಾರ್ಯಕ್ರಮದ ಸದುಪಯೋಗ ಪಡೆಯಲು ಹಾಗೂ ಫವತಿ ಖಾತೆ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ ಪ್ರಕಟಣೆಯಲ್ಲಿ ಕೋರಿದ್ದಾರೆ.