ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣವನ್ನು ಕಿಡಿಗೇಡಿಗಳು ಕದ್ದುಕೊಂಡು ಹೋಗಿರುವ ಘಟನೆ ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ನಡೆದಿದೆ.
ಪೊಲೀಸ್ ಕಮಿಷನರ್ ಕಚೇರಿಯ ಹಿಂಭಾಗ ಹಾಗೂ ವಿಧಾನಸೌಧದಿಂದ ಒಂದು ಕಿ.ಮೀಗಿಂತ ಕಡಿಮೆ ದೂರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇತ್ತೀಚೆಗೆ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣವನ್ನು ಕಳ್ಳರಿ ಕದ್ದುಕೊಂಡು ಹೋಗಿದ್ದಾರೆ. ಇದು ಹಲವರ ಅಚ್ಚರಿಗೆ ಕಾರಣವಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಖಾಸಗಿ ಕಂಪನಿಯೊಂದು ಸ್ಟೀಲ್ನಿಂದ ₹10 ಲಕ್ಷ ವೆಚ್ಚದಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಿತ್ತು. ನಿರ್ಮಾಣ ಮಾಡಿದ ಒಂದು ತಿಂಗಳಲ್ಲಿ ನಿಲ್ದಾಣ ನಾಪತ್ತೆಯಾಗಿದೆ.
ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಅವರು ಬಸ್ ನಿಲ್ದಾಣವನ್ನು ನೋಡಲು ಸ್ಥಳಕ್ಕೆ ಬಂದಾಗ ಸ್ಥಳದಲ್ಲಿ ಬಸ್ ನಿಲ್ದಾಣ ಇಲ್ಲದಿರುವುದು ಬೆಳಕಿಗೆ ಬಂದಿದೆ.
ತಂಗುದಾಣವನ್ನು ತೆರವು ಮಾಡಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 30ರಂದು ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಎಲ್ಲ ಪೊಲೀಸ್ ಠಾಣೆಗಳ ಡಿಜಿಟಲೀಕರಣ: ಪೊಲೀಸ್ ಆಯುಕ್ತ ದಯಾನಂದ
ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕದ್ದುಕೊಂಡು ಹೋಗಿರುವ ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಸದ್ಯ ಬಸ್ ನಿಲ್ದಾಣದ ಅಕ್ಕ-ಪಕ್ಕದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ.