ರಾಜಧಾನಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಯಲಹಂಕ ತಾಲೂಕು, ಜಾಲ ಹೋಬಳಿ, ಕಟ್ಟಿಗೇನಹಳ್ಳಿಗಳಲ್ಲಿ ಸರ್ಕಾರಿ ಭೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದು, ಖಾಸಗಿಯವರಿಂದ ಒತ್ತುವರಿಯಾಗಿದ್ದ ಸುಮಾರು ₹70 ಕೋಟಿ ಮೌಲ್ಯದ 6.05 ಎಕರೆ ಸರ್ಕಾರಿ ಜಮೀನನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಅವರ ಸೂಚನೆ ಮೇರೆಗೆ ಕಂದಾಯ ಇಲಾಖೆಯಿಂದ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಕಳೆದ ಮೂರು ವಾರದಲ್ಲಿ ಕಂದಾಯ ಇಲಾಖೆ ನಡೆಸುತ್ತಿರುವ ನಾಲ್ಕನೇ ಒತ್ತುವರಿ ತೆರುವು ಕಾರ್ಯಾಚರಣೆ ಇದಾಗಿದೆ.
ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ನಾನಾ ಕಡೆಗಳಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಭೂ ಕಬಳಿಕೆದಾರರು, ಭೂಮಾಫಿಯಾ ವಿರುದ್ಧ ಕಂದಾಯ ಇಲಾಖೆ ಸಮರ ಸಾರಿದೆ. ಕೊಟ್ಟಿಗೇನಹಳ್ಳಿ ಸರ್ವೆ ನಂ.28 ರಲ್ಲಿ 6.5 ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡಲಾಗುವುದು. ಜಿಲ್ಲಾಧಿಕಾರಿಗಳು ಒತ್ತುವರಿ ಪಟ್ಟಿ ತಯಾರಿಸಿ, ಪ್ರತಿ ವಾರಾಂತ್ಯದಲ್ಲಿ ತೆರುವು ಕಾರ್ಯಾಚರಣೆ ನಡೆಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಯಲಹಂಕ ತಾಲೂಕಿನ ಒತ್ತುವರಿಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಯಲಹಂಕದ ಬಾಗಲೂರಿನ ಬಳಿ ₹66 ಕೋಟಿ ಮೌಲ್ಯದ 6.07 ಎಕರೆ ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಲಾಗಿತ್ತು. ಇದರ ಬೆನ್ನಲ್ಲೇ, ಕಟ್ಟಿಗೇನಹಳ್ಳಿಯಲ್ಲೂ ₹70 ಕೋಟಿ ಮೌಲ್ಯದ 6.05 ಎಕರೆ ಮೌಲ್ಯದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಯಲಹಂಕ ತಾಲ್ಲೂಕು ಜಾಲ ಹೋಬಳಿ, ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂ.28 ರ ಜಮೀನಿಗೆ ಸಂಬಂಧಿಸಿದಂತೆ, ಗೋಮಾಳದ ಜಮೀನಿಗೆ ವಿವರವಾದ ವರದಿಯನ್ನು ದಾಖಲೆಗಳೊಂದಿಗೆ ಸಲ್ಲಿಸಲು ಮತ್ತು ಜಮೀನಿನಲ್ಲಿ ಯಾವುದೇ ಖಾತೆ ಅನುಭವವಿಲ್ಲದೇ ಇರುವ ಒತ್ತುವರಿದಾರರನ್ನು ಖುಲ್ಲಾಪಡಿಸಿ ಕ್ರಮವಹಿಸಬೇಕು ಎಂದು ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಭಾರೀ ಮಳೆಗೆ ನಲುಗಿದ ನಗರ; ಸಮಸ್ಯೆ ಪರಿಹರಿಸಲು ಬಿಬಿಎಂಪಿ ವಿಫಲ
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 104 ರ ಅಡಿ ವಿಚಾರಣೆ ನಡೆಸಲು ನಿರ್ಧರಿಸಿ ಪ್ರತಿವಾದಿಗಳಿಗೆ ನೋಟಿಸ್ ಕೂಡ ನೀಡಲಾಗಿತ್ತು. ಅದರಂತೆ ಕಟ್ಟಿಗೇನಹಳ್ಳಿಯ ಸರ್ವೆ ನಂ.28 ರ ಜಮೀನಿನಲ್ಲಿ ತಾಲೂಕು ಮೋಜಿಣಿದಾರರು ಒತ್ತುವರಿ ಎಂದು ಗುರುತಿಸಿದ 6.05 ಎಕರೆ ಜಮೀನನ್ನು ಇಂದು (ಸೋಮವಾರ) ಸರ್ಕಾರದ ವಶಕ್ಕೆ ಪಡೆಯಲಾಗಿದೆ.