ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಅ.9) ಸಾಯಂಕಾಲದಿಂದ ಶುರುವಾದ ಮಳೆ ರಾತ್ರಿಯಿಡಿ ಸುರಿದಿದೆ. ಪರಿಣಾಮ ನಗರದ ರಸ್ತೆಗಳೆಲ್ಲ ನೀರಿನಿಂದ ಸಂಪೂರ್ಣ ಜಲಾವೃತವಾಗಿದ್ದು, ದಾರಿಹೋಕರು, ವಾಹನ ಸವಾರರು ಪರದಾಡುವಂತಾಗಿದೆ.
ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಸದಾಶಿವನಗರ, ಶಾಂತಿನಗರ, ರಿಚ್ಮಂಡ್ ಟೌನ್, ಬಿಟಿಎಮ್ ಲೇಔಟ್, ವಿಜಯನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ನಾಯಂಡಹಳ್ಳಿ, ಹೊಸಕೆರೆಹಳ್ಳಿ, ಗೋವಿಂದರಾಜ ನಗರ, ಮಲ್ಲೇಶ್ವರಂ, ಬೆಳ್ಳಂದೂರು ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ಸುಮಾರು 4-5 ಕಿಲೋ ಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮಳೆಯ ಅವಾಂತರ
Slow moving traffic at Roopena Agrahara, Hosur Road (Electronic city corridor) due to waterlogging. pic.twitter.com/V4J5dShAuD
— Joint CP, Traffic, Bengaluru (@Jointcptraffic) October 9, 2023
ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ, ರೈಲ್ವೆ ಅಂಡರ್ಪಾಸ್, ವಿಜಯನಗರದ ಧನಂಜಯ ಪ್ಯಾಲೇಸ್, ಬನ್ನೇರುಘಟ್ಟ ರಸ್ತೆ, ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣನಗರ ಬ್ರಿಡ್ಜ್, ಹೆಸರಘಟ್ಟದಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾಗಿವೆ.
ರಸ್ತೆಗಳಲ್ಲಿ ಹೊಳೆಯಂತೆ ಮಳೆ ಹಾಗೂ ಚರಂಡಿ ನೀರು ಹರಿಯುತ್ತಿದೆ. ಮಳೆಯಿಂದ ರಸ್ತೆಗಳಷ್ಟೇ ಅಲ್ಲದೇ, ಅಂಡರ್‌ಪಾಸ್‌ಗಳು ಜಲಾವೃತವಾಗಿವೆ. ಇದರಿಂದ ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳು ಹೈರಾಣಾಗಿದ್ದಾರೆ. ಅಲ್ಲದೇ, ನಗರದ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.
ಮಳೆಯಿಂದ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಬಳಿ ರಸ್ತೆಗೆ ರಾಜಕಾಲುವೆ ನೀರು ನುಗ್ಗಿದ್ದು, 50 ಮೀಟರ್ ಉದ್ದದ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಇದರಿಂದ ನಿಮಿಷ ನಿಮಿಷಕ್ಕೂ ನೀರಿನ ಮಟ್ಟ ಏರಿಕೆಯಾಗಿತ್ತು. 15ಕ್ಕೂ ಹೆಚ್ಚು ವಾಹನ, 50ಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿಕೊಂಡಿದ್ದರು.
ರಸ್ತೆಯಲ್ಲಿ ನೀರಿನ ಮಟ್ಟ ಏರಿಕೆಯಿಂದ ವಾಹನಗಳು ಹೊರಬರಲಾಗದೆ ಪರದಾಡುತ್ತಿದ್ದವು. ಜನರಲ್ಲಿ ಆತಂಕ ಹೆಚ್ಚಾಗಿತ್ತು. ಸುಮಾರು 15ಕ್ಕೂ ಹೆಚ್ಚು ವಾಹನಗಳು ಮತ್ತು ಗರ್ಭಿಣಿ ಸೇರಿ 50ಕ್ಕೂ ಹೆಚ್ಚು ಜನ ಸಿಲುಕಿಕೊಂಡಿದ್ದರು. ಸತತ ನಾಲ್ಕು ಗಂಟೆಗಳ ಕಾಲ ನರಕ ಅನುಭವಿಸಿದರು. ಸದ್ಯ ರಾತ್ರಿ 11 ಗಂಟೆಗೆ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜನರನ್ನು ರಕ್ಷಿಸಿದ್ದಾರೆ. ನೀರಲ್ಲಿ ಸಿಲುಕಿದ್ದವರನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರಿಸಿದ್ದಾರೆ.
ಸುರಿದ ಧಾರಾಕಾರ ಮಳೆಗೆ 8ನೇ ಮೈಲಿ ತುಮಕೂರು ರಸ್ತೆ ಕೆರೆಯಂತಾಗಿದೆ. ರಾಜಕಾಲುವೆ ಬ್ಲಾಕ್ನಿಂದಾಗಿ ಕಿಲೋಮೀಟರ್ ವರೆಗೆ ರಸ್ತೆ ತುಂಬೆಲ್ಲ ನೀರು ತುಂಬಿದ್ದು, ಪೀಣ್ಯ ಸಂಚಾರ ಪೊಲೀಸರು ಕಸ ಕಡ್ಡಿ ತೆರವುಗೊಳಿಸಿ ನೀರು ಹರಿಯಲು ಸುಗಮಗೊಳಿಸಿದರು.
ಇನ್ನೊಂದೆಡೆ ಪೀಣ್ಯದ 8ನೇ ಮೈಲಿ ಸಿಗ್ನಲ್ ಬಳಿ ಮಳೆ ನೀರಲ್ಲೇ ವ್ಯಕ್ತಿಯೊಬ್ಬರು ಮಲಗಿದ್ದು ಕಂಡುಬಂದಿತು. ಕುಡಿದ ಮತ್ತಿನಲ್ಲಿ ಮಲಗಿದ್ದ ಎನ್ನಲಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಎಬ್ಬಿಸಿ ಕಳುಹಿಸಿದ್ದಾರೆ.
ಇಂಟೆಲ್ ಹೊರಗೆ ಬೆಳ್ಳಂದೂರಿನ ಆರ್‌ಎಮ್‌ಜೆಡ್ ಇಕೋಸ್ಪೇಸ್ ಕಡೆಗೆ ಮಳೆ ನೀರು ನದಿಯ ರೀತಿ ಹರಿಯುತ್ತಿತ್ತು.
ಲೀ ಮೆರಿಡಿಯನ್ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದೆ. ಹಾಗಾಗಿ, ಬ್ಯಾರಿಕೇಡ್ ಹಾಕಿ ಅಂಡರ್ ಪಾಸ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಇತ್ತೀಚಿಗಷ್ಟೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಅಂಡರ್ ಪಾಸ್ ರೆಡಿ ಮಾಡಲಾಗಿತ್ತು. ಆದರೂ ಸಹ ನೀರು ತುಂಬಿಕೊಂಡಿದ್ದು, ಇದರೊಂದಿಗೆ ಒಂದೇ ಮಳೆಗೆ ಬಿಬಿಎಂಪಿ ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ.
ಭಾರೀ ಮಳೆಯಿಂದಾಗಿ ಯಮಲೂರುನಿಂದ ಕರಿಯಮ್ಮನ ಅಗ್ರಹಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ನೀರಿನಲ್ಲಿ ಕಾರು ಹಾಗೂ ಬೈಕ್ಗಳು ಸಿಲುಕಿಕೊಂಡಿದ್ದವು, ಹಾಗಾಗಿ, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ನೀರು ತುಂಬಿಕೊಂಡಿದ್ದರಿಂದ ಚಾಲಕರು, ಕಾರುಗಳನ್ನು ಸ್ಥಳದಲ್ಲೇ ಬಿಟ್ಟು ಮನೆ ಸೇರಿ ಪ್ರಾಣಪಾಯದಿಂದ ಪಾರಾಗಿದ್ದರು. ಹೀಗಾಗಿ, ಸೋಮವಾರ ರಾತ್ರಿಯಿಂದ ಎರಡು ಕಾರು ನೀರಿನಲ್ಲೇ ಇವೆ. ಇದರಿಂದ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಕೆಂಗೇರಿ 8.3 ಸೆಂ.ಮೀ, ಅಂಜನಾಪುರ 7.6 ಸೆಂ.ಮೀ, ಆರ್.ಆರ್.ನಗರ 6.8 ಸೆಂ.ಮೀ, ಹೆಚ್.ಎ.ಎಲ್ ವಿಮಾನ ನಿಲ್ದಾಣ 6.4 ಸೆಂ.ಮೀ, ನಾಯಂಡಹಳ್ಳಿ 6.3 ಸೆಂ.ಮೀ, ಕೊಟ್ಟಿಗೆಪಾಳ್ಯ 6.2 ಸೆಂ.ಮೀ, ಬಿಳೇಕಹಳ್ಳಿ 5.9 ಸೆಂ.ಮೀ, ಪೀಣ್ಯ 5.8 ಸೆಂ.ಮೀ, ನಾಗಪುರ 5.5 ಸೆಂ.ಮೀ, ಅರಕೆರೆ 5.4 ಸೆಂ.ಮೀ, ಮಾರತಹಳ್ಳಿ 5.3 ಸೆಂ.ಮೀ, ಬಾಗಲಕುಂಟೆ 5.3 ಸೆಂ.ಮೀ, ಕೋರಮಂಗಲ 4.9 ಸೆಂ.ಮೀ, ದಯಾನಂದ ನಗರ 4.9 ಸೆಂ.ಮೀ, ವಿದ್ಯಾಪೀಠ 4.8 ಸೆಂ.ಮೀ, ಬಿಟಿಎಂ ಲೇಔಟ್ 4.4 ಸೆಂ.ಮೀ, ಸಿಂಗಸಂದ್ರ 4.3 ಸೆಂ.ಮೀ, ಹೊರಮಾವು 4.2 ಸೆಂ.ಮೀ ಮಳೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರು ದಿನ ಭಾರೀ ಮಳೆ; ಕೆಲವೆಡೆ ಯೆಲ್ಲೋ ಅಲರ್ಟ್ ಘೋಷಣೆ
ಮುಂದಿನ ನಾಲ್ಕು ದಿನ ಮಳೆ ಸಾಧ್ಯತೆ
ನಗರದಲ್ಲಿ ಕಳೆದೆರಡು ದಿನಗಳಿಂದ ಗುಡುಗು ಸಹಿತ ಮಳೆ ಸುರಿದಿದೆ. ಇನ್ನೂ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ನಗರದ ಬಹುತೇಕ ರಸ್ತೆಗಳು ಎರಡು ಗಂಟೆಯ ಮಳೆಗೆ ಸಂಪೂರ್ಣ ಜಲಾವೃತವಾಗುತ್ತಿವೆ. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಉಂಟಾಗುತ್ತದೆ. ಮಳೆನೀರು ಹರಿದು ಹೋಗಲು ಜಾಗವಿಲ್ಲದೆ ಈ ಅವಾಂತರ ಸೃಷ್ಟಿಯಾಗುತ್ತದೆ.
ಚರಂಡಿಯ/ ಅಡ್ಡಮೋರಿಯ ಬಾಯಿಗೆ ಅಡ್ಡಲಾಗಿ ಹಾಕಿರುವ ಕಟ್ಟಡಗಳಿಂದ ಅಳವಡಿಸಿರುವ ಸ್ಯಾನಿಟರಿ ಕೊಳವೆ, ನೀರು ಕೊಳವೆ, ಕರೆಂಟ್ ಕೇಬಲ್, ಓಎಪ್‌ಸಿ ಕೇಬಲ್‌ಗಳಿಂದಾಗಿ / ಹೂಳುತುಂಬಿರುವುದರಿಂದ, ಮುರಿದ ಕವರಿಂಗ್ ಚಪ್ಪಡಿಗಳಿಂದ ಸರಾಗವಾಗಿ ನೀರು ಹರಿದು ದೊಡ್ಡ ಚರಂಡಿ ಸೇರುತ್ತಿಲ್ಲ. ಟಾರು/ ಕಾಂಕ್ರೀಟ್ ಮೇಲುಮಯ್ ಮೇಲೆ ಬಿದ್ದ ಮಳೆನೀರು ಪುಟ್‌ಪಾತ್ ಕೆಳಗಿನ ತೋಳುಚರಂಡಿಗಳ ಮೂಲಕ ಹರಿಯಬೇಕಿದೆ.ಇಲ್ಲೂ ಹೂಳು…,,ತೋಳುಚರಂಡಿಯ ಬಾಯಿಗೆ ಕಬ್ಬಿಣದ ಜಾಲರಿ ಹಾಕಿ ಪ್ಲಾಸ್ಟಿಕ್ ಕಸ ಚರಂಡಿ ಸೇರದಂತೆ ಮೊದಲು ಮಾಡಬೇಕಿದೆ.
ಕೆಳಹಂತದ ಇಂಜಿನಿಯರುಗಳು ಡಿಪಾರ್ಟ್‌ಮೆಂಟ್ ಮೂಲಕ ಇ ಬಗೆಯ maintenance ಕೆಲಸಮಾಡಿಸುವುದು ಗುತ್ತಿಗೆದಾರರ ಕಳ್ಳತನ ತಡೆಯಲು ಇರುವ ದಾರಿ .