ಬಿಳಿ ಬಣ್ಣದ ಹುಂಡೈ ಕ್ರೇಟಾ ಕಾರಿನಲ್ಲಿ ಬಂದ ವ್ಯಕ್ತಿಯು, ತನಗೆ ಸಿಗರೇಟ್ ತಂದು ಕೊಡಲಿಲ್ಲವೆಂದು ಅಪರಿಚಿತರನ್ನು ಕೊಲೆ ಮಾಡಲು ಯತ್ನಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಗಾಣಿಗರಪಾಳ್ಯ ನಿವಾಸಿ ಸಂಜಯ್(29) ಮೃತ ಟೆಕಿ. ಜೆ ಪಿ ನಗರದ ಚೇತನ್(30) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೈದ ಆರ್ ಆರ್ ನಗರ ನಿವಾಸಿ ಕಾರು ಚಾಲಕ ಪ್ರತೀಕ್(32) ಎಂಬಾತನನ್ನು ಬಂಧಿಸಲಾಗಿದೆ.
ಮೇ 10ರಂದು ಮುಂಜಾನೆ ಸುಮಾರು 4 ಗಂಟೆಗೆ ಕೋಣನಕುಂಟೆ ಕ್ರಾಸ್ ಸಮೀಪದ ವಸಂತಪುರ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ಜೆಪಿ ನಗರ 7ನೇ ಹಂತದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಸಂತ್ರಸ್ತರು ಮೇ 10ರಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
“ನಾನು ಮತ್ತು ಸ್ನೇಹಿತ ಮೇ 10ರಂದು ಬೆಳಗಿನ ಜಾವ ಜೆ ಪಿ ನಗರದಿಂದ ಕೋಣನಕುಂಟೆ ಕ್ರಾಸ್ ಹತ್ತಿರ ಬೈಕ್‌ನಲ್ಲಿ ಬಂದು, ತಳ್ಳುವ ಗಾಡಿಯ ಮೇಲಿನ ಟೀ ಕುಡಿಯುತ್ತಿದ್ದ ವೇಳೆ ಬಿಳಿ ಬಣ್ಣದ ಹುಂಡೈ ಕ್ರೇಟಾ ಕಾರಿನಲ್ಲಿ ಬಂದ ವ್ಯಕ್ತಿಯು ಸಿಗರೇಟ್ ನೀಡುವಂತೆ ಕೇಳಿದನು. ತಾನು ಟೀ ಕುಡಿಯಲು ಬಂದಿರುವುದಾಗಿ ತಿಳಿಸಿ, ಸಿಗರೇಟ್ ಬೇಕಾದರೆ ಬಂದು ತೆಗೆದುಕೋ ಎಂದು ಕಾರಿನಲ್ಲಿದ್ದ ವ್ಯಕ್ತಿಗೆ ಹೇಳಿದೆವು. ಅದಕ್ಕೆ ಹುಂಡೈ ಕ್ರೇಟಾ ಕಾರಿನಲ್ಲಿದ್ದ ವ್ಯಕ್ತಿಯು, ಕಾರಿನಿಂದ ಇಳಿದು ದೂರುದಾರರಿಗೆ ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ಮಾಡಲು ಮುಂದಾಗಿದ್ದನು” ಎಂದು ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟರಲ್ಲಿ ಟೀ ಕುಡಿದು ಸಂಜಯ್ ಮತ್ತು ಚೇತನ್ ಮನೆಗೆ ವಾಪಸ್ ಹೊರಟ್ಟಿದ್ದಾರೆ. ಅದೇ ವೇಳೆ ಕಾರು ಚಾಲಕ ಪ್ರತೀಕ್ ಹಿಂದಿನಿಂದ ವೇಗವಾಗಿ ಕಾರು ಚಲಾಯಿಸಿ ಉದ್ದೇಶ ಪೂರ್ವಕವಾಗಿ ಸಂಜಯ್‌ನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅಂಗಡಿಯೊಂದರ ರೋಲಿಂಗ್ ಶೆಟರ್‌ಗೆ ದ್ವಿಚಕ್ರ ವಾಹನ ಸಹಿತ ಸಂಜಯ್ ಹಾಗೂ ಹಿಂಬದಿ ಸವಾರ ಚೇತನ್ ಗುದ್ದಿಕೊಂಡು ಬಿದ್ದಿದ್ಧಾರೆ.
ಕಾರು ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂಜಯ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಹಿಂಬದಿ ಸವಾರ ಚೇತನ್‌ಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಚೇತನ್ ನೀಡಿದ ದೂರಿನ ಮೇರೆಗೆ ಸುಬ್ರಮಣ್ಯಪುರ ಠಾಣೆ ಪೊಲೀಸರು ಕಾರು ಚಾಲಕ ಪ್ರತೀಕ್ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಿದ್ದರು. ಈ ನಡುವೆ ಮೇ 13ರಂದು ಟೆಕಿ ಸಂಜಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕ ಪ್ರತೀಕ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ಪ್ರಕರಣ ದಾಖಲಾದ ಕೇವಲ 10 ಗಂಟೆಯೊಳಗೆ ಆರ್ ಆರ್ ನಗರದ ಚನ್ನಸಂದ್ರದಲ್ಲಿ ಕೊಲೆ ಮಾಡಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಹಾಗೆಯೇ ಬಿಎಸ್‌ಕೆ 6ನೇ ಹಂತದ ತುರಹಳ್ಳಿ ಬಳಿಯಿರುವ ಖಾಲಿ ನಿವೇಶನದಲ್ಲಿ, ಕೃತ್ಯಕ್ಕೆ ಬಳಸಿದ ಕಾರನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮನರೇಗಾ ಯೋಜನೆಯಡಿ ಅಭಿವೃದ್ಧಿ; ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಮೆರಗು
ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬಿಳಿ ಬಣ್ಣದ ಹುಂಡೈ ಕ್ರೇಟಾ ಕಾರನ್ನು ಮೇ 11ರಂದು ವಶಪಡಿಸಿಕೊಳ್ಳಲಾಗಿದೆ. ಅದೇ ದಿನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್ ಲೋಕೇಶ್ ಭರಮಪ್ಪ ಜಗಲಾಸರ್ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಗಿರೀಶ್ ಎಸ್ ಬಿ ಅವರ ನೇತೃತ್ವದಲ್ಲಿ, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜು ಎಂ ಎಸ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.