ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.
ರಾಮನಗರದ ಕೆಂಪೇಗೌಡನದೊಡ್ಡಿ ಬಳಿ ಹೆದ್ದಾರಿಯಲ್ಲಿ ಲಾರಿಯ ಹಿಂಬದಿಗೆ ಒಮಿನಿ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಓರ್ವ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾರೆ. ಮಕ್ಕಳು ಸೇರಿದಂತೆ ನಾಲ್ವರಿಗೆ ಗಾಯಗಳಾಗಿದ್ದು, ರಾಮನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಪೀಣ್ಯ ನಿವಾಸಿಗಳಾದ ರಾಜೇಶ್ (50) ಇವರ ಪತ್ನಿ ಸುಮಾ (45) ಹಾಗೂ ಮತ್ತೊಬ್ಬ ಮಹಿಳೆ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಇತರೆ ನಾಲ್ವರಿಗೆ ಗಾಯಗಳಾಗಿದ್ದು, ಇವರನ್ನು ರಾಮನಗರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಪೀಣ್ಯದಲ್ಲಿ ನಲೆಸಿರುವ ಕುಟುಂಬ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃಪಕ್ಷ ಪೂಜೆ ಮಾಡಿಸಲು ಒಂದೇ ಕುಟುಂಬದ ಏಳು ಜನರು ಒಮಿನಿ ಕಾರಿನಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳುತ್ತಿದ್ದರು. ಲಾರಿ ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿತ್ತು. ಮೈಸೂರು ಮಾರ್ಗವಾಗಿ ಪ್ರಯಾಣ ಬೆಳೆಸಿದ್ದ ಒಮಿನಿ ಕಾರು, ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಒಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಒಮಿನಿ ಕಾರು ಲಾರಿಗೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತವಾದ ಹಿನ್ನೆಲೆ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ರಾಮನಗರ ಸಂಚಾರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 persons killed on Bengaluru-Mysore NH today while attempting overtaking
Road Accident Deaths in 2022-
India-1.68 lakh
Karnataka-11,732
Bengaluru-777#RoadSafety requires more serious engagement
In my new role too will train Police men regarding Road Safety & investigation pic.twitter.com/vl7scGF74N— alok kumar (@alokkumar6994) October 14, 2023
“ಶನಿವಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓವರ್ ಟೆಕ್ ಮಾಡಲು ಯತ್ನಿಸಿ 4 ಮಂದಿ ಸಾವನ್ನಪ್ಪಿದ್ದಾರೆ. 2022ರಲ್ಲಿ ರಸ್ತೆ ಅಪಘಾತದಿಂದ ಭಾರತದಲ್ಲಿ 1.68 ಲಕ್ಷ, ಕರ್ನಾಟಕದಲ್ಲಿ 11,732 ಹಾಗೂ ಬೆಂಗಳೂರಿನಲ್ಲಿ 777 ಮಂದಿ ಸಾವನ್ನಪ್ಪಿದ್ದಾರೆ. ರಸ್ತೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ಅಲೋಕ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.