ಬೆಂಗಳೂರು | ಹೋರಾಟಕ್ಕೆ ಮಣಿದ ನ್ಯಾಷನಲ್ ಕಾಲೇಜು; ಪ್ರಾಧ್ಯಾಪಕರ ಹಿಂಬಡ್ತಿ ಆದೇಶ ವಾಪಸ್‌

0
1876
ನ್ಯಾಷನಲ್ ಕಾಲೇಜಿನ ಎದುರು ನೆರೆದಿರುವ ಹೋರಾಟಗಾರರು | national college
ನ್ಯಾಷನಲ್ ಕಾಲೇಜಿನ ಎದುರು ನೆರೆದಿರುವ ಹೋರಾಟಗಾರರು | national college

ದಲಿತರೆಂಬ ಕಾರಣಕ್ಕೆ ಪ್ರಾಧ್ಯಾಪಕರೊಬ್ಬರಿಗೆ ವೃತ್ತಿಯಲ್ಲಿ ಹಿಂಬಡ್ತಿ ನೀಡಿದ್ದ ಬೆಂಗಳೂರಿನ ನ್ಯಾಷನಲ್‌ ಕಾಲೇಜು ದಲಿತ ಸಂಘಟನೆಗಳ ಹೋರಾಟಕ್ಕೆ ಮಣಿದಿದೆ. ಪ್ರಾಧ್ಯಾಪಕರಿಗೆ ನೀಡಿದ್ದ ಹಿಂಬಡ್ತಿ ಆದೇಶವನ್ನು ವಾಪಸ್‌ ಪಡೆದುಕೊಳ್ಳುವುದಾಗಿ ಒಪ್ಪಿಕೊಂಡಿದೆ.

ಬಸವನಗುಡಿಯಲ್ಲಿರುವ ನ್ಯಾಷನಲ್‌ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದ ಡಾ. ರವಿಕುಮಾರ್ ಬಾಗಿ ಎಂಬವರಿಗೆ ಹಿಂಬಡ್ತಿ ನೀಡಲಾಗಿತ್ತು. ಪದವಿ ಕಾಲೇಜಿನಿಂದ ಪಿಯು ಕಾಲೇಜಿಗೆ ವರ್ಗಾಯಿಸಿ ಹಿಂಬಡ್ತಿ ನೀಡಲಾಗಿತ್ತು. ಅಲ್ಲದೆ, ರವಿಕುಮಾರ್‌ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಲು ಸೇವಾ ದೃಢೀಕರಣ ಪತ್ರವನ್ನೂ ಕಾಲೇಜಿನ ಪ್ರಾಂಶುಪಾಲರು ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.

ರವಿಕುಮಾರ್ ಅವರ ಮೇಲೆ ಕಾಲೇಜು ಆಡಳಿತ ಮಂಡಳಿ ಎಸಗಿದ ಧೋರಣೆಯನ್ನು ಖಂಡಿಸಿ ದಲಿತ ಸಂಘಟನೆಗಳ ಮುಖಂಡರು ಕಾಲೇಜಿನ ಎದುರು ಫೆಬ್ರವರಿ 2ರಂದು ಪ್ರತಿಭಟನೆ ನಡೆಸಿ, ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದ್ದರು. ಅಲ್ಲದೆ, ಫೆಬ್ರವರಿ 6ರ ಮಂಗಳವಾರ ಕೂಡ ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.

ಒಂದು ಹಂತದಲ್ಲಿ ಒಂದು ತಾಸು ಕಾಲ ಎಲ್ಲರನ್ನೂ ಆಡಳಿತ ಮಂಡಳಿ ಕಾಲೇಜಿನ ಹೊರಗೆ ನಿಲ್ಲಿಸಿ, ಪೊಲೀಸರ ಮೂಲಕ ನಿಯಂತ್ರಿಸಿದ ಕಾರಣ ಮಾತಿನ ಚಕಮಕಿ ಕೂಡ ನಡೆಯಿತು. ನಂತರ ಮತ್ತೆ ಎಲ್ಲರನ್ನೂ ಎಚ್ ನರಸಿಂಹಯ್ಯ ಸಭಾಂಗಣದಲ್ಲಿ ಕೂರಿಸಿ ಮಾತುಕತೆ ನಡೆಸಲಾಯಿತು.

ಆ ಬಳಿಕ ಎಲ್ಲ ಬೇಡಿಕೆಗಳಿಗೆ ಒಪ್ಪಿಕೊಂಡ ಕಾಲೇಜು ಆಡಳಿತ ಮಂಡಳಿ, ಪ್ರಾಧ್ಯಾಪಕ ರವಿಕುಮಾರ್ ಅವರಿಗೆ ನೀಡಿದ್ದ ಹಿಂಬಡ್ತಿಯನ್ನು ವಾಪಸ್‌ ಪಡೆಯಲು ಒಪ್ಪಿಕೊಂಡಿದೆ. ಜೊತೆಗೆ ಪದವಿ ಕಾಲೇಜಿನಲ್ಲಿಯೇ ಬೋಧನೆ ಮುಂದುವರೆಸಲು ಒಪ್ಪಿದೆ. ಆ ಮೂಲಕ ವಿವಾದ ಸುಖಾಂತ್ಯ ಕಂಡಿದೆ.

ಈ ವರದಿ ಓದಿದ್ದೀರಾ?: ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ದಲಿತರ ಮೇಲೆ ದೌರ್ಜನ್ಯ: ಆರೋಪ

ಮಾತುಕತೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನ್ಯಾಯವಾದಿ ಡಾ. ಸಿ ಎಸ್ ದ್ವಾರಕಾನಾಥ್, “ರವಿಕುಮಾರ್ ಬಾಗಿ ಅವರನ್ನು ಹಿಂಬಡ್ತಿ ಪಡೆದಿರುವ ನಿರ್ಧಾರ ವಾಪಸ್ ಪಡೆಯಲು ನ್ಯಾಷನಲ್ ಕಾಲೇಜು ಪಡೆಯಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ. ನಮ್ಮ ಹೋರಾಟ ಯಶಸ್ವಿಯಾಗಿದೆ. ಸಣ್ಣ ತಪ್ಪಿನಿಂದಾಗಿ ಇಂತಹ ತಪ್ಪು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದನ್ನು ಆಡಳಿತ ಮಂಡಳಿ ಮನವರಿಕೆ ಮಾಡಿಕೊಂಡಿದೆ. ಎಲ್ಲವೂ ಮಾತುಕತೆಯ ಮೂಲಕ ಬಗೆಹರಿಸಲಾಗಿದೆ” ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಚ್. ಎನ್. ಸುಬ್ರಹ್ಮಣ್ಯ ಮಾತನಾಡಿ, “ಯಾವುದೇ ಒತ್ತಡ ನಮ್ಮ ಮೇಲೆ ಇರಲಿಲ್ಲ. ಈ ಬೆಳವಣಿಗೆಗೆ ಸಂವಹನದ ಕೊರತೆಯಿಂದ ಆಗಿದೆ ಎಂದು ಮನಗಂಡಿದ್ದೇವೆ. ಮುಂದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದೇವೆ” ಎಂದ ಅವರು, “ದಲಿತ ಉಪನ್ಯಾಸಕರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ತಪ್ಪು ಭಾವನೆಯಿಂದ ಸುದ್ದಿ ಹಬ್ಬಿದೆ. ಆಡಳಿತ ಮಂಡಳಿಗೆ ಚುನಾಯಿತರಾಗಿರುವ 10 ಮಂದಿಯಲ್ಲಿ ಆರು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ. ಹಾಗಾಗಿ, ಯಾವುದೇ ತಾರತಮ್ಯ ಉಪನ್ಯಾಸಕರಿಗೆ ಮಾಡುತ್ತಿಲ್ಲ” ಎಂದು ಹೇಳಿದರು.

ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ಅಗ್ರಹಾರ ಕೃಷ್ಣಮೂರ್ತಿ, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಜಿ ಎನ್ ನಾಗರಾಜ್, ಹಿರಿಯ ಪತ್ರಕರ್ತರಾದ ಬಿ‌ ಸಿ ಬಸವರಾಜ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಶ್ರೀಪಾದ್ ಭಟ್, ಗೌರಿ, ಡಾ. ಹುಲಿಕುಂಟೆ ಮೂರ್ತಿ, ನ್ಯಾಯವಾದಿ ವಿನಯ್ ಶ್ರೀನಿವಾಸ್ ಮತ್ತಿತರರು ಭಾಗಿಯಾಗಿದ್ದರು.

“ಕಳೆದ 13 ವರ್ಷದಿಂದ ಬಸವನಗುಡಿಯ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪದವಿ, ಸ್ನಾತಕೋತ್ತರ ಪದವಿಗಳಿಗೆ ಬೋಧಿಸಿದ್ದೇನೆ. ಪಿಎಚ್‌ಡಿ ಪದವಿಯನ್ನು ಹೊಂದಿದ್ದೇನೆ. ಸ್ನಾತಕೋತ್ತರ ಕೇಂದ್ರದ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಯಾವ ಸೂಚನೆಯನ್ನು ನೀಡದೆ ಏಕಾಏಕಿ ದುರುದ್ದೇಶದಿಂದ ಜಯನಗರ ನ್ಯಾಷನಲ್ ಪಿಯುಸಿ ಕಾಲೇಜಿಗೆ ಹಿಂಬಡ್ತಿ ನೀಡಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಪ್ರಾಂಶುಪಾಲರಾದ ವೈ.ಸಿ.ಕಮಲಾ ಅವರು ಅಧ್ಯಾಪಕರು ಮತ್ತು ವಿಧ್ಯಾರ್ಥಿಗಳಲ್ಲಿ ನೇರವಾಗಿಯೇ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದಾರೆ” ಎಂದು ಪ್ರಾಧ್ಯಾಪಕ ರವಿಕುಮಾರ್ ಬಾಗಿ ಆರೋಪಿಸಿದ್ದರು.

LEAVE A REPLY

Please enter your comment!
Please enter your name here