ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಕ್ರಮಗಳ ಫಲವಾಗಿ ವ್ಯಾಘ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ರಾಜ್ಯದಲ್ಲಿ 475ರಿಂದ 573 ಹುಲಿಗಳು ಇರಬಹುದು ಎಂದು ವಿಶ್ಲೇಷಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಹುಲಿದಿನಕ್ಕೆ ಎರಡು ದಿನಗಳ ಮುಂಚೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಹುಲಿ ಗಣತಿ ವಿವರ ಬಿಡುಗಡೆ ಮಾಡಿ ಅವರು ಮಾತನಾಡಿದರು. “ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವು ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಲಾಗಿದೆ. ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಅರಣ್ಯ ಪ್ರದೇಶ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ 5,399 ಕ್ಯಾಮೆರಾ ಟ್ರಾಪ್ ಬಳಸಿ ಸಮೀಕ್ಷೆ ನಡೆಸಲಾಗಿದೆ. ಕ್ಯಾಮೆರಾ ಕಣ್ಣಿಗೆ 435 ಹುಲಿಗಳು ಬಿದಿದ್ದು, ರಾಜ್ಯದಲ್ಲಿ 475ರಿಂದ 573 ಹುಲಿಗಳು ಇರಬಹುದು ಎಂದು ವಿಶ್ಲೇಷಿಸಲಾಗಿದೆ” ಎಂದು ತಿಳಿಸಿದರು.
“ಪ್ರಪಂಚದಲ್ಲೇ ಮೊದಲ ಬಾರಿಗೆ ಹುಲಿ ಗಣತಿ ನಡೆದಿದ್ದು ಭಾರತದಲ್ಲಿ. ಜಾರ್ಖಂಡ್‌ನ ಪಲ್ಮಾವ್ ಹುಲಿ ರಕ್ಷಿತಾರಣ್ಯದಲ್ಲಿ ಪ್ರಾಯೋಗಿಕ ಗಣತಿ ನಡೆದಿತ್ತು. 1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ 1972ರಿಂದ ಹುಲಿ ಗಣತಿಯನ್ನು ಆರಂಭಿಸಲಾಯಿತು. ಪ್ರತಿ 4 ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತಿದೆ” ಎಂದು ವಿವರಿಸಿದರು.