ಕೇಂದ್ರ ಬಿಜೆಪಿ ಸರ್ಕಾರ ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ದೌರ್ಜನ್ಯದ ವಿರುದ್ಧ ಹಾಗೂ ಬಿಜೆಪಿ ಸಂಸದರ ಪ್ರತಿಕೃತಿ ದಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಇಐ ಅಧ್ಯಕ್ಷ ಎಸ್ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಕೂಡಲೇ ಮಹದಾಯಿ ಯೋಜನೆಗೆ ಹಾಗೂ ರೈತರ ಹಿತಕ್ಕಾಗಿ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಆಗ್ರಹಿಸಿದರು.
“ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯದ ಜನತೆಗೆ ಮೊದಲಿನಿಂದಲೂ ದ್ರೋಹ ಬಗೆಯುತ್ತಿದೆ. ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಬೇಕೆಂದು ಸಾಕಷ್ಟು ಬಾರಿ ದೇಶದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದರೂ ಕೂಡ ಸೂಕ್ತ ರೀತಿಯಲ್ಲಿ ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸದೆ ಮಹದಾಯಿ ಯೋಜನೆಯನ್ನು ನಿರಾಕರಿಸುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆದಿದೆ” ಎಂದು ಆರೋಪ ವ್ಯಕ್ತವಾಯಿತು.
“ಕರ್ನಾಟಕದಿಂದ 20ಕ್ಕೂ ಹೆಚ್ಚು ಸಂಸದರು ನಾಲ್ಕೈದು ಮಂದಿ ಕೇಂದ್ರ ಸಚಿವರು ಇದ್ದರೂ ಕೂಡ ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯ ಸರ್ಕಾರದ ಮನವಿ ರೈತರ ಪರವಾಗಿದೆ ಎಂದು ಒಪ್ಪಿಸುವ ಹೋರಾಟವನ್ನು ಎಂದಿಗೂ ಮಾಡಿಲ್ಲ. ನಿಜವಾಗಿಯೂ ಬಿಜೆಪಿ ಸಂಸದರು ಕರ್ನಾಟಕ ರಾಜ್ಯದ ದ್ರೋಹಿಗಳು” ಎಂದು ದೂರಿದರು.
“ಕೇಂದ್ರ ಸರ್ಕಾರದಲ್ಲಿ ರಾಜ್ಯದಿಂದ ಚುನಾಯಿತರಾಗಿರುವ ಸಂಸದರು, ಮಂತ್ರಿಗಳಾಗಿದ್ದಾರೆ. ಕೇವಲ ಪ್ರಚಾರಕ್ಕೋಸ್ಕರ ಅಧಿಕಾರಕ್ಕಾಗಿ ಮಾತ್ರ ರಾಜ್ಯದ ಮತದಾರರನ್ನು ಉಪಯೋಗಿಸಿಕೊಂಡು ಮೋಜು ಮಾಡುತ್ತಿದ್ದಾರೆ. ರಾಜ್ಯದ ಹಿತಕ್ಕಾಗಿ ಎಂದೂ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಕೇವಲ ಒಂದು ಸಣ್ಣ ರಾಜ್ಯದ ಮುಖ್ಯಮಂತ್ರಿಗಳ ಮಾತಿಗೆ ಕೇಂದ್ರ ಸರ್ಕಾರ ತಲೆಬಾಗಿದೆ. ಮಹದಾಯಿ ಯೋಜನೆಯನ್ನು ಸ್ಥಗಿತಗೊಳಿಸಲು ಬಿಜೆಪಿ ಕೇಂದ್ರ ಸರ್ಕಾರ ಮುಂದಾಗಿರುವುದು ಅತ್ಯಂತ ದುರದೃಷ್ಟಕರ. ಕೇಂದ್ರದ ಮಂತ್ರಿಗಳು ಪ್ರಧಾನಿಯನ್ನು ಭೇಟಿ ಮಾಡಿ ಮಹದಾಯಿ ಯೋಜನೆಗೆ ಒಪ್ಪಿಗೆ ಕೊಡಿಸಲು ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಟೀಕಿಸಿದರು.
ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಾರೆ. ನಿಜವಾದ ಕನ್ನಡಿಗರ ಮತ್ತು ಕರ್ನಾಟಕದ ದ್ರೋಹಿಗಳೆಂದರೆ ಇವರೇ.
ಕೇಂದ್ರ ಸರ್ಕಾರ ಕೂಡಲೇ ಮಹದಾಯಿ ಯೋಜನೆಗೆ ಅನುಮತಿ ನೀಡಬೇಕು. ಇದು ಕುಡಿಯುವ ನೀರಿನ ಯೋಜನೆ ರೈತರ ಒಳಿತಿಗಾಗಿ, ಜನರ ಒಳಿತಗಾಗಿ ತಂದಿರುವ ಯೋಜನೆಯನ್ನು ನಿರಾಕರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಪಾಠವನ್ನು ಕಲಿಸುತ್ತಾರೆ. ಹಾಗಾಗಿ ಕೂಡಲೇ ಅನುಮತಿ ನಿರಾಕರಣೆಯನ್ನು ಹಿಂದಕ್ಕೆ ಪಡೆಯಬೇಕು. ಗೋವಾ ಸರ್ಕಾರದ ಮಾತನ್ನು ನಿರಾಕರಿಸಿ ಮಹದಾಯಿ ಯೋಜನೆಗೆ ಅನುಮತಿ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ವಿರೋಧ; ಮಕ್ಕಳನ್ನು ಶಾಲೆ ಬಿಡಿಸುವ ಬೆದರಿಕೆ
ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ. ಆನಂದ್, ಎಂ ಎ ಸಲೀಂ, ಕುಶಾಲ್ ಅರುವೆಗೌಡ, ಜಿ ಪ್ರಕಾಶ್ ಪುಟ್ಟರಾಜು, ಉಮೇಶ್, ಸುಂಕದಕಟ್ಟೆ ನವೀನ್, ಚಿನ್ನಿ ಪ್ರಕಾಶ್, ಪ್ರವೀಣ್ ರಾವ್ ಓಬಳೇಶ್, ಸಂಜಯ್ ಸಶಿಮಠ, ಅಜಯ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.