ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕಾಗಿ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ ಕಂಬಗಳಿಗೆ ಅಧಿಕಾರಿಗಳು ಮೊಳೆ ಹೊಡೆದಿದ್ದರು ಎಂದು ವರದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಕರ್ನಾಟಕ ಸರ್ಕಾರದ ದತ್ತಿ ಇಲಾಖೆಗೆ ನೋಟಿಸ್ ನೀಡಿದೆ.
ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಮೊಳೆ ಹೊಡೆಯಲಾಗಿರುವ ಫೋಟೊಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬೆನ್ನಲ್ಲೇ ಎಎಸ್‌ಐ ನೋಟಿಸ್ ಜಾರಿಗೊಳಿಸಿದೆ.
ಕನ್ನಡ ಜ್ಯೋತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಹಂಪಿಗೆ ತೆರಳಿದ್ದರು. ಇದೇ ವೇಳೆ ಧ್ವಜ ಕಟ್ಟಲು ವಿರೂಪಾಕ್ಷ ದೇವಾಲಯದ ಕಂಬಗಳನ್ನು ಡ್ರಿಲ್‌ನಿಂದ ಕೊರೆದು ದತ್ತಿ ಇಲಾಖೆಯಿಂದಲೇ ಮೊಳೆ ಹೊಡೆಸಲಾಗಿತ್ತು. ಆದರೆ, ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಪುರಾತತ್ವ ಇಲಾಖೆಯು ದತ್ತಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ.
“ದೇವಾಲಯದ ಉತ್ತರ ದಿಕ್ಕಿನಲ್ಲಿ ಗೇಟ್ ಕೂರಿಸಲು, ಭಕ್ತರು ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಬೇಕೆಂದು ದತ್ತಿ ಇಲಾಖೆಯಿಂದ ಮೊಳೆ ಹೊಡೆಯಲಾಗಿದೆ ಎಂದು ತಿಳಿದುಬಂದಿದೆ. ಮೊಳೆ ಹೊಡೆಯುವ ಮುನ್ನ ದತ್ತಿ ಇಲಾಖೆಯು ಪುರಾತತ್ವ ಇಲಾಖೆಯ ಅನುಮತಿ ಪಡೆದಿಲ್ಲ, ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ, ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಿ ಇಲಾಖೆಯ ಅಧಿಕಾರಿಯನ್ನು ಕರೆಸಿ ನೋಟಿಸ್ ಜಾರಿಗೊಳಿಸಲಾಗಿದೆ” ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯರಗೋಳ್ ಅಣೆಕಟ್ಟು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
“ಹಂಪಿ ದೇವಾಲಯದ ಕಂಬವನ್ನು ವಿರೂಪಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ದೇವಾಲಯದ ಕಂಬಗಳಿಗೆ ಹಾನಿ ಮಾಡಿರುವ ಫೋಟೊಗಳನ್ನು ದಾಖಲೆಯಾಗಿ ಪರಿಗಣಿಸಲಾಗಿದೆ. ಹಂಪಿಯು 1986ರಲ್ಲಿಯೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, ಮಾನ್ಯತೆ ಪಡೆದಿದೆ. ಇದಕ್ಕೆ ಹಾನಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.