ನ್ಯಾಯಾಧೀಶರ ಹುದ್ದೆಗೆ ನಡೆಯಲಿರುವ ಲಿಖಿತ ಪರೀಕ್ಷೆ ಬರೆಯಲು ಎಂಟೂವರೆ ತಿಂಗಳ ಗರ್ಭಿಣಿ ವಕೀಲೆಯೊಬ್ಬರಿಗೆ ಅವರು ವಾಸ ಇರುವ ಊರಿನಲ್ಲೇ ಅವಕಾಶ ಕಲ್ಪಿಸುವ ಮೂಲಕ ಹೈಕೋರ್ಟ್ ಮಾನವೀಯತೆ ಮೆರೆದಿದೆ. ಹೈಕೋರ್ಟ್ ಇದೇ ಮೊದಲ ಬಾರಿಗೆ ಇಂತಹದೊಂದು ವಿಶೇಷ ಅವಕಾಶವನ್ನು ಕಲ್ಪಿಸಿದೆ.
ತಾವು ನೆಲೆಸಿರುವ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ಅವಕಾಶ ಕೋರಿ ಅಭ್ಯರ್ಥಿ ಸಲ್ಲಿಸಿದ್ದ ಮನವಿಯನ್ನು ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿ ಸಮಿತಿಯ ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್, ಕೆ ಸೋಮಶೇಖರ್, ಎಸ್ ಸುನಿಲ್ ದತ್ ಯಾದವ್, ಅಶೋಕ್ ಎಸ್ ಕಿಣಗಿ ಮತ್ತು ಎಂ ನಾಗಪ್ರಸನ್ನ ಅವರು ಮಾನ್ಯ ಮಾಡಿದ್ದಾರೆ. ಈ ನಿರ್ಧಾರಕ್ಕೆ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಸಮ್ಮತಿ ಸೂಚಿಸಿದ್ದಾರೆ.
ಸಿವಿಲ್ ನ್ಯಾಯಾಧೀಶರ 57 ಹುದ್ದೆಗಳ ಭರ್ತಿಗೆ ಹೈಕೋರ್ಟ್‌ನಿಂದ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಜುಲೈ 23ರಂದು ಪೂರ್ವಭಾವಿ ಪರೀಕ್ಷೆ ನಡೆದಿತ್ತು. 6000 ಅಭ್ಯರ್ಥಿಗಳ ಪೈಕಿ 1,022 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ಇವರಲ್ಲಿ ನೇತ್ರಾವತಿ ಕೂಡ ಒಬ್ಬರು. ಒಂದು ಪರೀಕ್ಷೆಯನ್ನು ನೇತ್ರಾವತಿ ಅವರು ಬರೆದಿದ್ದಾರೆ. ಇಂದು ಮತ್ತೊಂದು ಪರೀಕ್ಷೆ ಬರೆಯಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕುಮಾರಸ್ವಾಮಿಯವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ: ಸಚಿವ ಎಚ್ ಸಿ ಮಹದೇವಪ್ಪ
“ಲಿಖಿತ ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರವೇ ನಡೆಯಲಿದೆ. ಬೇರೆಲ್ಲೂ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಮಂಗಳೂರಿನ ವಕೀಲೆ ನೇತ್ರಾವತಿ ಅವರು ಈ ಪರೀಕ್ಷೆಗೆ ಹಾಜರಾಗಬೇಕಿದ್ದು, ಅವರೀಗ ತುಂಬು ಗರ್ಭಿಣಿಯಾಗಿರುವ ಕಾರಣ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲೇ ಪರೀಕ್ಷೆ ಬರೆಯಲು ಅವರಿಗೆ ಅವಕಾಶ ನೀಡಲಾಗಿದೆ. ಪರೀಕ್ಷೆ ಬರೆಯುವ ಸ್ಥಳದಲ್ಲಿ ಅಭ್ಯರ್ಥಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಕ್ಕೆ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ” ಎಂದು ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ತಿಳಿಸಿದ್ದಾರೆ.