ಬೆಂಗಳೂರಿನ ಹೊರ ವರ್ತುಲ ರಸ್ತೆ (ಒಆರ್‌ಆರ್) ಸುತ್ತಮುತ್ತಲಿನ ಪ್ರದೇಶಗಳಾದ ಮಾರತ್ತಹಳ್ಳಿ, ಬೆಳ್ಳಂದೂರು, ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆಆರ್ ಪುರಂ, ಹೆಬ್ಬಾಳ ಮತ್ತು ಗೊರಗುಂಟೆಪಾಳ್ಯದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯ ತೀವ್ರತೆ ಹೆಚ್ಚಾಗಿದೆ. ಸಂಚಾರ ದಟ್ಟಣೆಯನ್ನು ನಿವಾರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೊರ ವರ್ತುಲ ರಸ್ತೆಯ ಕಂಪನಿಗಳ ಸಂಘ (ಒಆರ್‌ಆರ್‌ಸಿಎ) ಒತ್ತಾಯಿಸಿದೆ.
ಹೊರ ವರ್ತುಲ ರಸ್ತೆಯಲ್ಲಿ ನಡೆಯುವ ಮೆಟ್ರೋ ಕಾಮಗಾರಿಗಳ ಕಾರಣದಿಂದಾಗಿ ಸಂಚಾರ ಮತ್ತಷ್ಟು ದುಸ್ತರವಾಗಿದೆ. ಹೀಗಾಗಿ, ರಸ್ತೆ ಆಸುಪಾಸಿನಲ್ಲಿ ಸೇವಾ ರಸ್ತೆ (ಸರ್ವೀಸ್ ರೋಡ್) ಇರುವುದು ಬಹಳ ಮುಖ್ಯ. ಬಿಬಿಎಂಪಿಯು ಫ್ಲೈಓವರ್‌ಗಳು ಮತ್ತು ಸರ್ವಿಸ್ ರಸ್ತೆಗಳನ್ನು ನಿರ್ವಹಿಸುವತ್ತ ಗಮನ ಹರಿಸಬೇಕು. ಜೊತೆಗೆ, ರಸ್ತೆ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗದಂತೆ ಬಿಎಂಆರ್‌ಸಿಎಲ್ ಕಾಮಗಾರಿ ನಡೆಸಬೇಕು ಎಂದು ಸಂಘ ಒತ್ತಿ ಹೇಳಿದೆ.
ಅಕ್ರಮ ಪಾರ್ಕಿಂಗ್ ಮತ್ತು ಫುಟ್‌ಪಾತ್ ಒತ್ತುವರಿಯನ್ನು ತಡೆಯಲು ಬಿಬಿಎಂಪಿ ಮತ್ತು ಬೆಂಗಳೂರು ಟ್ರಾಫಿಕ್ ಪೋಲೀಸರು (ಬಿಟಿಪಿ) ರಚಿಸಿರುವ ತಂಡಗಳು ಸೇವಾ ರಸ್ತೆಗಳಲ್ಲಿ ಪ್ರತಿದಿನ ಗಸ್ತು ತಿರುಗಬೇಕು. ಇದರೊಂದಿಗೆ ಪೀಕ್ ಅವರ್‌ನಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕು. ಜೊತೆಗೆ, ಹತ್ತಿರದ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು ಫೀಡರ್ ಬಸ್ ಸೇವೆಗಳನ್ನು ಪರಿಚಯಿಸಬೇಕು. ಮೆಟ್ರೋ ನಿಲ್ದಾಣಗಳಿಂದ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಒದಗಿಸಲು ಖಾಸಗಿ ಬಸ್‌ಗಳಿಗೆ ಅವಕಾಶ ನೀಡಬೇಕು ಎಂದು ಸಂಘ ಹೇಳಿದೆ.
ಹೊರ ವರ್ತುಲ ರಸ್ತೆಯ ಕಳಪೆ ವಿನ್ಯಾಸ ಮತ್ತು ಪರ್ಯಾಯ ರಸ್ತೆಗಳ ಕೊರತೆಯಿಂದಾಗಿ, ಯಾವೊಂದು ವಾಹನ ರಸ್ತೆಯಲ್ಲಿ ಕೆಟ್ಟು ನಿಂತರೆ, ಇಡೀ ರಸ್ತೆ ಜಾಮ್ ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ತಕ್ಷಣವೇ ಖಾಲಿ ಮಾಡಲು ಮೀಸಲಾದ ಟೋಯಿಂಗ್ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘ ಒತ್ತಾಯಿಸಿದೆ.